Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಉರುಳಿದ ಬಸ್ಸು. ಪ್ರಯಾಣಿಕರು ಅಪಾಯದಿಂದ ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: . ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಕೋಟ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಪಲ್ಟಿಯಾಗಿ, ಬಸ್ಸಿನಲ್ಲಿದ್ದವರಿಗೆ ಸಣ್ಣ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ಗುರುವಾರದ ಬೆಳಿಗ್ಗೆ ಕುಂದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕೋಟ ಅಂಡರ್ ಪಾಸ್ ಮೇಲೆ, ಲಾರಿಯೊಂದನ್ನು ಓವರಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿ ಬಂದ ಕಾರಣ, ಓವರಟೇಕ್ ಮಾಡುವ ಭರದಲ್ಲಿ ಅಂಡರ್‌ಪಾಸ್ ಮೇಲ್ಭಾಗದಲ್ಲಿದ್ದ ಸೈಡ್ ಕಾಂಕ್ರೀಟ್ ಬ್ಯಾರಿಕೇಡ್‌ಗೆ ಗುದ್ದಿ, ಅಂಡರ್‌ಪಾಸ್ ಮೇಲ್ಭಾಗದಲ್ಲಿಯೇ ಪಲ್ಟಿ ಹೊಡೆದು ಬಿದ್ದಿದೆ. ಜೋರಾಗಿ ಮಳೆ ಮಳೆ ಬರುತ್ತಿದ್ದ ಕಾರಣ ರಸ್ತೆ ಸಂಪೂರ್ಣ ನೀರು ಹರಿದಿದ್ದು, ಬ್ರೇಕ್ ಹಾಕಿದ್ದರು ಕೂಡ ಬಸ್ ನಿಲ್ಲದೇ ಬ್ಯಾರಿಕೆಡ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿರಬಹುದು ಎನ್ನಲಾಗಿದೆ. ಅಪಘಾತ ನಡೆದ ವೇಳೆ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕನನ್ನು ಹೊರತುಪಡಿಸಿ ೩ ೪ ಮಂದಿ ಮಹಿಳಾ ಪ್ರಯಾಣಿಕರು ಇದ್ದು, ಬಸ್ ಪಲ್ಟಿ ಹೊಡೆದಾಗ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ತಪ್ಪಿದ ಅನಾಹುತ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರು ಸದೃಢವಾದ ಕಾಂಕ್ರೀಟ್ ವಾಲ್ ಬ್ಯಾರಿಕೆಡ್ ನಿರ್ಮಿಸಿರುವುದರಿಂದ, ಬಸ್ ಬ್ಯಾರಿಕೆಡ್‌ಗೆ ಢಿಕ್ಕಿ ಹೊಡೆದರು ಕೂಡ ಅಂಡರ್‌ಪಾಸ್ ಮೇಲ್ಭಾಗದಿಂದ ಕೆಳಗೆ ಉರುಳದೆ, ಮೇಲ್ಭಾಗದಲ್ಲಯೇ ಪಲ್ಟಿ ಹೊಡೆದಿದೆ. ಒಂದೊಮ್ಮೆ ಬಸ್ ಬ್ಯಾರಿಕೆಡ್‌ಗೆ ಗುದ್ದಿ ಅಂಡರ್‌ಪಾಸ್‌ನಿಂದ ಕೆಳಗೆ ಬಿದ್ದಿದ್ದರೆ ಸರ್ವೀಸ್ ರಸ್ತೆಯಲ್ಲಿ ತೆರಳುವ ವಾಹನಗಳು ಬಸ್‌ನ ಅಡಿಗೆ ಸಿಲುಕಿ ಪ್ರಾಣ ಹಾನಿಯಾಗುವ ಸಂಭವವು ಅಧಿಕವಾಗಿತ್ತು. ಶಾಲಾ ಕಾಲೇಜುಗಳಿಗೆ, ದಿನ ನಿತ್ಯ ಉದ್ಯೋಗಕ್ಕೆ ತೆರಳುವವರು 9 ಗಂಟೆಯ ಒಳಗೆ ಬಸ್‌ನಲ್ಲಿ ತೆರಳಿದ್ದರು, ಇಲ್ಲವಾದಲ್ಲಿ ಯಾವತ್ತು ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರೇ ತುಂಬಿರುತ್ತಿದ್ದ ಬಸ್ ಪಲ್ಟಿಯಾದ ವೇಳೆ 4 ಪ್ರಯಾಣಿಕರೆ ಇದ್ದಿದ್ದು ಹೆಚ್ಚಿನ ಸಾವು ಸಂಭವಿಸುವುದು ತಪ್ಪಿದಂತಾಯಿತು.

ಬಸ್ ಪಲ್ಟಿ ಹೊಡೆದು ಸುಮಾರು 1 ಗಂಟೆಗಳಿಗೂ ಅಧಿಕ ಕಾಲ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಕೋಟ ಉಪನಿರೀಕ್ಷಕ ಕಬ್ಬಾಳ್‌ರಾಜ್ ಮತ್ತು ಸಿಬ್ಬಂದಿಗಳು ಆಗಮಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನ ಸಂಚಾರಕ್ಕೆ ಸರ್ವೀಸ್ ರಸ್ತೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದರು. ಅಲ್ಲದೇ ಹೆದ್ದಾರಿ ಕಾಮಗಾರಿಯವರ ಬಳಿಯಲ್ಲಿರುವ ಕ್ರೇನ್ ಬಳಿಸಿ ಪಲ್ಟಿ ಹೊಡೆದ ಬಸ್‌ನ್ನು ಎತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಘಟನಾಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಸಮಾಜಿಕ ಕಾರ್ಯಕರ್ತ ಕೇಶವ ಕೋಟೆಶ್ವರ, ಕೋಟ ಪಂಚಾಯಿತಿಯ ತಿಮ್ಮ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಭೋಜ ಪೂಜಾರಿ ಭೇಟಿ ನೀಡಿ ಇಲಾಖೆಗೆ ನೆರವು ನೀಡಿದರು.

Exit mobile version