ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಕತಾರ್: ಕರ್ನಾಟಕ ಸಂಘ ಕತಾರ್‌ನ ನೂತನ ಉಪಾಧ್ಯಕ್ಷರಾಗಿ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತಿಚಿಗೆ ಕತಾರ್‌ನ ಭಾರತೀಯ ಸಾಂಸ್ಕೃತಿಕ ಕಚೇರಿಯಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ಣಯವನ್ನು ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿದ್ದಾರೆ.
ಸ್ನೇಹಮಯಿ ಸುಬ್ರಹ್ಮಣ್ಯ:
ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ದುಬೈನ ಕತಾರ್‌ನಲ್ಲಿ ಪಸರಿಸುತ್ತಿರುವ ಕತಾರ್‌ನ ಕರ್ನಾಟಕ ಸಂಘದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ವಿವಿಧ ಪದವಿಗಳನ್ನು ಅಲಂಕರಿಸಿ ತಮ್ಮದೇ ಆದ ಛಾಪು ಮೂಡಿಸಿರುವ ಸುಬ್ರಹ್ಮಣ್ಯ ಅವರನ್ನು ಪ್ರಸಕ್ತ ಸಾಲಿನಲ್ಲಿ ಉಪಾಧ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಎಚ್.ಕೆ. ಮಧು ಹಾಗೂ ಪ್ರಧಾನ ಕಾರ್ಯದರ್ಶಿ ಸಂದೇಶ್ ಆನಂದ್ ಅವರ ಸಾರಥ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮುನ್ನಡೆಯುತ್ತಿರುವ ಕತಾರ್‌ನ ಕರ್ನಾಟಕ ಸಂಘವು ಈವರೆಗೆ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತೀಯರ ಸಂಘ-ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು 2013-15ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಪ್ರಸ್ತುತ ಸಾಲಿನಲ್ಲಿ ಕಾರ್ಯ ಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ ಸಂಘಟನೆಗಳ ಮೂಲಕ ನಿರಂತರವಾಗಿ ಅತ್ಯುತ್ತಮ ಕಾರ್ಯಕ್ರಮ ಹಾಗೂ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ಆಯೋಜಿಸುವಲ್ಲಿಯೂ ಅವರು ಯಶಕಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು ತಗ್ಗರ್ಸೆಯ ಹೆಬ್ಬಾಗಿಲು ಮನೆತನದ ಗುರುದತ್ತ ಶೇರುಗಾರ್ ಹಾಗೂ ಮುಕಾಂಬು ದಂಪತಿಗಳ ಹಿರಿಯ ಪುತ್ರರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮಯ್ಯಾಡಿ, ಬೈಂದೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗಕ್ಕಾಗಿ ಕತಾರ್‌ನಲ್ಲಿ ತೆರಳಿದವರು. ಅಲ್ಲಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಪತ್ನಿ ವನಿತಾ ಸುಬ್ರಹ್ಮಣ್ಯ ಹಾಗೂ ಪುತ್ರ ಪ್ರಥ್ವಿಕ್ ಅವರೊಂದಿಗೆ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ತಮ್ಮ ಸ್ನೇಹಮಯಿ ವ್ಯಕ್ತಿತ್ವ, ಕ್ರೀಯಾಲತೆ ಹಾಗೂ ಬದ್ಧತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಇದೀಗ ಅವರು ಪ್ರತಿಷ್ಠಿತ ಸಂಘಟನೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅವರ ಬಂಧುಮಿತ್ರರಲ್ಲಿ ಸಂತಸ ಮೂಡಿದೆ. / ಕುಂದಾಪ್ರ ಡಾಟ್ ಕಾಂ ಸುದ್ದಿ /

