Kundapra.com ಕುಂದಾಪ್ರ ಡಾಟ್ ಕಾಂ

ಅಮೆರಿಕಾ ಕೊಂಕಣಿ ಸಮ್ಮೇಳನಕ್ಕೆ ಸಾಂಸ್ಕೃತಿಕ ಅತಿಥಿಯಾಗಿ ಜಾದೂಗಾರ ಓಂಗಣೇಶ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೇರಿಕದ ಜಾರ್ಜಿಯಾ ರಾಜ್ಯದಲ್ಲಿನ ಅಟ್ಲಾಂಟಾ ನಗರದಲ್ಲಿ ಜುಲೈ 1ರಿಂದ ಮೂರು ದಿನ ನಡೆಯಲಿರುವ ’ವಿಶ್ವ ಕೊಂಕಣಿ ಸಮ್ಮೇಳನ 2016’ ರಲ್ಲಿ ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಉಪ್ಪುಂದ ವಿಶೇಷ ಸಾಂಸ್ಕೃತಿಕ ಅತಿಥಿಯಾಗಿ ಆಹ್ವಾನ ಪಡೆದಿದ್ದಾರೆ.

ಕನ್ನಡ ಕೊಂಕಣಿ ಎರಡೂ ಭಾಷೆಯಲ್ಲಿ ಪ್ರವಾಸ ಕಥನ, ಅಂಕಣಗಳಲ್ಲದೆ ಹಲವು ನಾಟಕಗಳ ಅನುವಾದಕರಾಗಿ ರಾಜ್ಯ ಕೊಂಕಣಿ ಅಕಾಡೆಮಿಯ ಪ್ರಶಸ್ತಿ ಪಡೆದ ಸಾಹಿತಿಯಾಗಿ ಮಾನ್ಯರಾದ ಓಂಗಣೇಶ್ ತಮ್ಮ 40 ದೇಶದ ಪ್ರವಾಸಾನುಭವ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ಅಮೇರಿಕಾದ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರದಲ್ಲೂ ತಮ್ಮ ಭಾಷೆಯ ಮೂಲ ಪರಂಪರೆ ಸಂಸ್ಕೃತಿಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ 1996ರಿಂದ ನ್ಯೂಜರ್ಸಿ, ಚಿಕಾಗೊ, ಹ್ಯೂಸ್ಟನ್, ಲಾಸ್ ಎಂಜಲೀಸ್, ಸಾನ್ ಫ್ರಾನ್ಸಿಸ್‌ಕೊ, ಟೊರೆಂಟೊ ಮುಂತಾದ ನಗರಗಳಲ್ಲಿ ಯಶಸ್ವೀ ಸಮ್ಮೇಳನ ಸಂಘಟಿಸುತ್ತಾ ಬಂದ ’ನಾರ್ತ್ ಅಮೆರಿಕನ್ ಕೊಂಕಣಿ ಅಸೊಶಿಯೆಷನ್’(NAKA) ಈ ಬಾರಿ ದಕ್ಷಿಣದ ಜಾರ್ಜಿಯಾ ಕೊಂಕಣಿ ಸಂಘಟನೆಯ ಸಹಯೋಗದೊಂದಿಗೆ ಅಲ್ಲಿನ ಇಂಟರ್ ನ್ಯಾಷನಲ್ ಕನ್‌ವೆನ್ಷನ್ ಸೆಂಟರ್ ನಲ್ಲಿ ಈ ಉತ್ಸವವನ್ನು ಹಮ್ಮಿಕೊಂಡಿದೆ.
ಅಟ್ಲಾಂಟ ಕೊಂಕಣಿ ಸಂಘಟನೆಯ ರಾಜೇಂದ್ರ ಕಿಣಿ ಪ್ರಮೋದ ನಾಯಕ್, ಸುಧಾ ಸುರೇಶ್ ಶೆಣೈ, ವಿಕಾಸ್ ಮಂಜುಳಾ ಆರ‍್ಗೋಡು, ಸರಿತಾ ರಾಜ್‌ಭಟ್ ಬಾಣೂರು ನಾಗೇಶ್ ಹಾಗೂ ನಾಕಾ ಮಾತೃ ಸಂಸ್ಥೆಯ ಸದಾನಂದ ಮಂಕಿಕರ್, ಸುರೇಶ್ ಬಿ ಶೆಣೈ, ವಸಂತ್ ಭಟ್, ರಂಜೀತ್ ಶಿರಾಳ್ಕರ್ ಮೊದಲಾದವರನ್ನೊಳಗೊಂಡ ಉತ್ಸವ ಸಮಿತಿ ಕಾರ್ಯ ನಿರ್ವಹಿಸಲಿದ್ದು ಕಮ್ಮಟಗಳು ವಿಚಾರ ಸಂಕಿರ್ಣಗಳು ಸಾಹಿತ್ಯ ಘೋಷ್ಠಿಗಳು ಅಲ್ಲದೆ ನಾಟಕ ಯಕ್ಷಗಾನ ಜಾದೂ ಸಿನೆಮಾ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಂಕಣಿಗರ ಆಹಾರ ಮೇಳವನ್ನೂ ಏರ್ಪಡಿಸಲಾಗಿದೆ ಎಂದು ನಾಕಾ ಅಧ್ಯಕ್ಷೆ ಶೈಲಾ ಶೆಣೈ ರೆಡ್ಡಿ ತಿಳಿಸಿದ್ದಾರೆ.

Exit mobile version