Kundapra.com ಕುಂದಾಪ್ರ ಡಾಟ್ ಕಾಂ

ಸರಸ್ವತಿ ವಿದ್ಯಾಲಯದಲ್ಲಿ ‘ದೃಷ್ಟಿ’ ವಾರ್ಷಿಕ ಸಂಚಿಕೆ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ನಮ್ಮ ಸಾಮರ್ಥ್ಯದ ಬಗೆಗೆ ಭ್ರಮೆಗಳನ್ನು ಸೃಷ್ಟಿಸಿಕೊಳ್ಳದೆ ವಾಸ್ತವದ ಒಳಹೊಕ್ಕು ಸತ್ಯವನ್ನು ಅರಿತುಕೊಳ್ಳಬೇಕು.ನಮ್ಮ ಬುದ್ದಿವಂತಿಕೆ ಎನ್ನುವುದು ಸಮಾಜದ ಒಳಿತಿಗೆ ತೆರೆದುಕೊಂಡಾಗ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡದಲ್ಲಿ ಸ್ತ್ರೀ ಸಾಹಿತ್ಯಕ್ಕೆ ಮತ್ತಷ್ಟು ಮನ್ನಣೆ ಸಿಗಬೇಕಿದೆ.ಸಾಹಿತ್ಯದಿಂದ ಬದುಕಿನ ನಿಜವಾದ ಸಂತೋಷವನ್ನು ಅನುಭವಿಸಲು ಸಾಧ್ಯ.ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ. ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಶುಭ ಹಾರೈಸಿದರು.ವಿದ್ಯಾರ್ಥಿನಿ ಸುರಕ್ಷಾ ಭಾವಗೀತೆಯ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಉಪನ್ಯಾಸಕ ಎಚ್ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾರ್ಥಿನಿ ಜಯಲಕ್ಷ್ಮೀ ಸಕ್ಲಾತಿ ಸ್ವಾಗತಿಸಿದರು.ಪೂರ್ಣಿಮಾ ಅತಿಥಿಗಳನ್ನು ಪರಿಚಯಿಸಿದರು. ನಾದಿಯಾ ಸಿಮ್ರಾ ಕಾರ‍್ಯಕ್ರಮ ನಿರೂಪಿಸಿದರು.ನಮಿತಾ ಧನ್ಯವಾದ ಅರ್ಪಿಸಿದರು.

Exit mobile version