Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೋಬಳಿ ಪದಗ್ರಹಣ ಸಮಾರಂಭ

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಏಳು ಕೋಟಿ ಕನ್ನಡಿಗರು ಇರುವ ರಾಜ್ಯದಲ್ಲಿ ಎರಡು ಲಕ್ಷದಷ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳಿದ್ದು, ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕಂಪನ್ನು ತಲುಪಿಸಬೇಕಾದ ಗುರುತರ ಜವಾಬ್ದಾರಿ ಇದೆ. ಹೊಬಳಿ ಮಟ್ಟದಲ್ಲಿಯೂ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಹಿಂದೆ ಕನ್ನಡಿಗರನ್ನು ಸಂಘಟಿಸುವ ಉದ್ದೇಶವೂ ಅಡಗಿದೆ ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಬೈಂದೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೋಬಳಿ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಶೇಷಪ್ಪಯ್ಯ ಹೆಬ್ಬಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ. ಅದರ ಬಗೆಗೆ ಪ್ರೀತಿ ಇದ್ದರೆ ಮಾತ್ರ ನಮ್ಮ ನಡುವೆಯೇ ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯ ಎಂದರು.

ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಗಣಪತಿ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಸಾಪ ಕುಂದಾಪುರದ ನಿಟಕಪೂರ್ವಾಧ್ಯಕ್ಷ ನಾರಾಯಣ ಖಾರ್ವಿ, ಬೈಂದೂರು ರೋಟರಿ ಅಧ್ಯಕ್ಷ ರಘುರಾಮ ಶೆಟ್ಟಿ, ನಾವುಂದ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ ಉಪಸ್ಥಿತರಿದ್ದರು.

ಕಸಪಾ ಕುಂದಾಪುರ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಆಶಯ ನುಡಿಗಳನ್ನಾಡಿದರು. ಕಸಾಪ ಬೈಂದೂರು ಹೋಬಳಿ ಕೋಶಾಧ್ಯಕ್ಷ ಜನಾರ್ದನ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಧನ್ಯವಾದಗೈದರು. ಶಿಕ್ಷಕ ರಾಘವೇಂದ್ರ ಡಿ. ಪಡುವರಿ ಕಾರ್ಯಕ್ರಮ ನಿರೂಪಿಸಿದರು.

Exit mobile version