Kundapra.com ಕುಂದಾಪ್ರ ಡಾಟ್ ಕಾಂ

ಸಂಪುಟದಲ್ಲಿ ಸಚಿವಸ್ಥಾನ ನೀಡಿಲ್ಲ. ಶಾಸಕ ಗೋಪಾಲ ಪೂಜಾರಿ ಅಸಮಾಧಾನ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಂಪುಟ ಪುನಾರಚನೆ ಆಗುತ್ತಿದ್ದಂತೆ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಶಾಸಕರಿಂದ ಬಹಿರಂಗ ಆಕ್ರೋಶ ವ್ಯಕ್ತವಾಗುತ್ತಿದೆ. ಮಂತ್ರಿಮಂಡಲದಲ್ಲಿ ತನಗೆ ಅವಕಾಶ ನೀಡದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ಮುಂದಿನ ನಿಲುವೇನೆಂದು ಪ್ರಕಟಿಸಲಿದ್ದೇನೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸತತ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ನನಗೆ ಸಂಪುಟದಲ್ಲಿ ಅವಕಾಶ ನೀಡದೇ ಇರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.

ದಿ| ದೇವರಾಜ ಅರಸು ಅವರ ಕಾಲದಿಂದಲೂ ಈಡಿಗ ಹಾಗೂ ಬಿಲ್ಲವ ಸಮಾಜಕ್ಕೆ ಸಂಪುಟದಲ್ಲಿ ಪ್ರತ್ಯೇಕ ಸ್ಥಾನ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ವಿನಯಕುಮಾರ್ ಸೊರಕೆ ಅವರ ತೆರವಾದ ಸ್ಥಾನವನ್ನು ಹಿರಿಯ ಶಾಸಕರಾದ ವಸಂತ ಬಂಗೇರ ಅಥವಾ ನನಗೆ ನೀಡಬೇಕಿತ್ತು. ಪ್ರಮೋದ್ಗೆ ಸಚಿವ ಪದವಿ ನೀಡಿರುವಲ್ಲಿ ನನ್ನ ಆಕ್ಷೇಪ ಇಲ್ಲ ಎಂದ ಅವರು, ಈ ಭಾಗದಲ್ಲಿ ಸಮಸ್ತ ಬಿಲ್ಲವ ಸಮಾಜವನ್ನು ಅವಗಣಿಸಿರುವುದರಿಂದ ಪಕ್ಷದಿಂದ ಸಾಮಾಜಿಕ ನ್ಯಾಯ ದೊರಕದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಪಾಲ ಪೂಜಾರಿ ಅವರಿಗೆ ಸಚಿವ ಸ್ಥಾನ ಕೈತಪ್ಪಿ ಹೋಗಿರುವ ಬಗ್ಗೆ ಬೈಂದೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಬೇಸರ ಹಾಗೂ ಅಸಮಾಧಾನ ಕಂಡುಬಂದಿದೆ. ಜಿಲ್ಲೆಯ ಕಾಂಗ್ರೆಸ್ನ ಹಿರಿಯ ನಾಯಕರು ಗೋಪಾಲ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಹಾಗೂ ರಾಷ್ಟ್ರದ ನಾಯಕರಲ್ಲಿ ಒತ್ತಡ ಹೇರಲಿಲ್ಲ ಎನ್ನುವುದು ಕಾರ್ಯಕರ್ತರ ಅಸಮಾಧಾನವಾಗಿದೆ. ಈ ಹಿನ್ನಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

Exit mobile version