Site icon Kundapra.com ಕುಂದಾಪ್ರ ಡಾಟ್ ಕಾಂ

ಮಲೇರಿಯಾ ಜ್ವರ: ಕೊಲ್ಲೂರಿನ ಯುವತಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಲೇರಿಯಾ ಜ್ವರದಿಂದಾಗಿ ತಾಲೂಕಿನ ಕೊಲ್ಲೂರಿನ ಯುವತಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ವರದಿಯಾಗಿದೆ. ಮಾಜಿ ತಾಪಂ ಸದಸ್ಯ ಗೋಪಾಲಕೃಷ್ಣ ಅಡಿಗರ ಏಕೈಕ ಪುತ್ರಿಯಾದ ಭಾಗೀರತಿ ಅಡಿಗ (22) ಮೃತ ಯುವತಿ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಅನುವಂಶೀಯ ಅರ್ಚಕ ಕುಟುಂಬದ ಗೋಪಾಲಕೃಷ್ಣ ಅಡಿಗ ಮಗಳಾದ ಭಾಗೀರಥಿಗೆ ಜ್ವರ ಕಾಣಿಸಿಕೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಲೇರಿಯಾ ರೋಗವೆಂಬುದನ್ನು ಖಚಿತಪಡಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಯುವತಿ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.

ಕುಟುಂಬದಲ್ಲಿ ಎಲ್ಲರ ಪ್ರೀತಿಪಾತ್ರಳಾಗಿದ್ದ ಭಾಗೀರಥಿಯ ಅಗಲಿಕೆ ಕುಟುಂಬಕ್ಕೆ ತೀವ್ರ ಆಘಾತವನ್ನುಂಟುಮಾಡಿದೆ. ಬಿಎಸ್ಸಿ ಪದವಿಯ ಬಳಿಕ ಎಂಬಿಎಂ ಸ್ನಾತಕೋತ್ತರ ಪದವಿ ಪೂರೈಸಿದ್ದರೆನ್ನಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಎರಡು ವರ್ಷಗಳ ಬಳಿಕ ಮಲೇರಿಯಾ ಜ್ವರಕ್ಕೆ ಯುವತಿ ಬಲಿಯಾಗಿರುವುದು ತೀವ್ರ ಆತಂಕ ಮೂಡಿದೆ.

Exit mobile version