ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ನಡುವೆಯೇ ದೊರೆಯಬಹುದಾದ ಹಲವು ಶೈಕ್ಷಣಿಕ ಸಂಗತಿಗಳನ್ನು ಕಳೆದುಕೊಳ್ಳುತ್ತಾ ದಿಢೀರನೆ ಆಗುವ ಚಟುವಟಿಕೆಗಳಿಗೆ ಮಕ್ಕಳನ್ನು ತುರುಕಿಸುತ್ತಿರುವ ಆಂತಕದ ಸಂಗತಿಗಳ ನಡುವೆ ಸಾಂಸ್ಕೃತಿಕ ಕ್ರಿಯೆ ಹೆಚ್ಚುಚ್ಚು ನಡೆಯಬೇಕಾಗಿರುವುದು ಇಂದಿನ ಅಗತ್ಯತೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಹೇಳಿದರು.
ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ಚಾಲನೆಗೊಂಡ ನಾಲ್ಕು ದಿನಗಳ ಕಾರ್ಯಕ್ರಮ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ -2016’ರಲ್ಲಿ ಶುಭಶಂಸಗೈದರು. ರಂಗಭೂಮಿ ಎಂಬುದು ಭೂಮಿಯ ಜೊತೆಗಿನ ಸಂಬಂಧವನ್ನು, ನಮ್ಮದೇ ಕಥೆಯನ್ನು ನಮಗೆ ಅರಹುವ ಒಂದು ಪ್ರಕ್ರಿಯೆ. ನಾಟಕ ಹಾಗೂ ನಮ್ಮ ಬದುಕಿನ ಜೊತೆಗಿನ ನಂಟನ್ನು ಬೇರ್ಪಡಿಸಿ ನೋಡಲು ಸಾಧ್ಯವಾಗುವುದೇ ಇಲ್ಲ ಈ ಪ್ರಕ್ರಿಯೆಯೊಳಕ್ಕೆ ಎಲ್ಲರೂ ನಮ್ಮವಾಗಿಬಿಡುವ, ಎಲ್ಲವನ್ನೂ ಹಂಚಿಕೊಳ್ಳುವ ಕ್ರಿಯೆ ಮಹತ್ವದ್ದೆನಿಸಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ರವೀಂದ್ರ ಕಿಣಿ ಮಾತನಾಡಿ ಸಂಸ್ಥೆಯೊಂದನ್ನು ಕಟ್ಟುವುದಲ್ಲದೇ ಹಳ್ಳಿಯ ಜನರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸ ಈ ಭಾಗದಲ್ಲಿ ನಿರಂತರವಾಗಿ ನಡೆದು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಮಾತನಾಡಿ ಆಧುನಿಕ ಯುಗದಲ್ಲಿ ಯುವಜನತೆ ದಾರಿ ತಪ್ಪುವ ಅವಕಾಶಗಳೇ ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಂಸ್ಕೃತಿಕವಾದ ಚೌಕಟ್ಟು ಒಂದು ಉತ್ತಮ ವ್ಯಕ್ತಿತ್ವ ರೂಪುಗಳ್ಳುವಂತೆ ಮಾಡುತ್ತವೆ ಎಂದರು.
ಯಡ್ತರೆ ಗ್ರಾಪಂ ಸದಸ್ಯ ಸಿ. ಜೆ. ರೋಯಿ, ಮಾಜಿ ಸದಸ್ಯ ಶೇಷು ಪೂಜಾರಿ, ಕುಳ್ಳಂಕಿ, ಮುಲ್ಲಿಬಾರು ಸ.ಹಿ.ಪ್ರಾ ಶಾಲಾ ಶಿಕ್ಷಕ ಹಾಲೇಶಪ್ಪ, ಉದ್ಯಮಿ ಪ್ರಸಾದ್ ಪ್ರಭು ಮೊದಲಾದವರು ವೇದಿಕೆಯಲ್ಲಿದ್ದರು.
ಸಂಚಲನ ಹೊಸೂರು ಅಧ್ಯಕ್ಷ ತಿಮ್ಮ ಮರಾಠಿ ಸ್ವಾಗತಿಸಿ, ಕಾರ್ಯದರ್ಶಿ ನಾಗಪ್ಪ ಮರಾಠಿ ವಂದಿಸಿದರು. ಸಂಚಾಲಕ ಸುಧಾಕರ ಪಿ. ಬೈಂದೂರು ನಿರೂಪಿಸಿದರು.
ಬಳಿಕ ರಂಗಸುರಭಿ ಕಲಾವಿದರಿಂದ ಗಣೇಶ್ ಎಂ, ಮುಂಡಾಡಿ ನಿರ್ದೇಶನ ಮೂರು ಕಥೆಗಳನ್ನೊಳಗೊಂಡ ಕಥಾಸಂಗಮ ನಾಟಕ ಪ್ರರ್ಶನಗೊಂಡಿತು.