Kundapra.com ಕುಂದಾಪ್ರ ಡಾಟ್ ಕಾಂ

ಜಡ್ಕಲ್: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣು

ಹದಿನೈದು ವರ್ಷದ ಹಿಂದಿನ ತಪ್ಪಿಗೆ ಪ್ರಾಯಶ್ಚಿತವೆಂದು ಡೆತ್‌ನೋಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಹದಿನೈದು ವರ್ಷಗಳ ಹಿಂದೆ ಮಾಡಿದ ತಪ್ಪಿಗಾಗಿ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದಿಟ್ಟು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಜಡ್ಕಲ್ ಗ್ರಾಪಂ ವ್ಯಾಪ್ತಿಯ ಬೀಸಿನಪಾರೆ ಎಂಬಲ್ಲಿ ನಡೆದಿದೆ. ಬೀಸಿನಪಾರೆ ನಿವಾಸಿ ಜರೀಷ್ ಜೋಸೆಫ್ (34) ಆತ್ಮಹತ್ಯೆಗೆ ಶರಣಾದಾತ.

ಘಟನೆಯ ವಿವರ:
ಬೀಸಿನಪಾರೆ ರಸ್ತೆಯ ಬದಿಯಲ್ಲಿ ತನ್ನ ಮನೆಯಲ್ಲಿದ್ದ ಬಂದೂಕಿನಿಂದ ಬಾಯಿಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಶುಕ್ರವಾರ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಮರುದಿನ ಬೆಳಿಗ್ಗೆ ರಿಕ್ಷಾ ಚಾಲಕರೋರ್ವರು ಶವವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೀಸಿನಪಾರೆಯ ಕೆ.ವಿ. ಜೋಸೆಫ್ ಅವರ ಹನ್ನೆರಡು ಮಕ್ಕಳಲ್ಲಿ ಏಳನೆಯವನಾದ ಜರೀಶ್ ಊರಿನಲ್ಲಿಯೇ ಕೃಷಿ ಕೆಲಸ ಮಾಡಿಕೊಂಡಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ಯಾರೊಂದಿಗೂ ದ್ವೇಷ ಕಟ್ಟಿಕೊಂಡಿರಲಿಲ್ಲ ಎನ್ನಲಾಗಿದೆ. ಆದರೆ ಆತನ ಜೇಬಿನಲ್ಲಿ ದೊರೆತ ಡೆತ್ ನೋಟ್‌ನಲ್ಲಿ ಹದಿನೈದು ವರ್ಷಗಳ ಹಿಂದೆ ತಾನು ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದು, ಹದಿನೈದು ವರ್ಷದ ಹಿಂದೆ ಮಾಡಿದ ತಪ್ಪಾದರೂ ಏನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಂಭ್ರಮಿಸಬೇಕಾದ ಕುಟುಂಬದಲ್ಲಿ ಶೋಕ ಸಾಗರ:
ಜರೀಶ್ ಅವರ ತಂದೆ – ತಾಯಿ ಮದುವೆಯಾಗಿ ಜುಲೈ 10ಕ್ಕೆ ಐವತ್ತು ವರ್ಷ ಪೂರ್ಣಗೊಳ್ಳುತ್ತಿದ್ದರಿಂದ, ಮದುವೆಯ ಸುವರ್ಣ ಸಂಭ್ರಮವನ್ನು ಆಚರಿಸಲು ಕುಟುಂಬ ತಯಾರಿಯಲ್ಲಿತ್ತು. ಮುಂದಿನ ತಿಂಗಳೂ ಜರೀಶ್ ಅವರ ಮದುವೆಯೂ ನಿಗದಿಯಾಗಿತ್ತು. ಅಷ್ಟರದಲ್ಲಿಯೇ ಆತ ಕಠಿಣ ನಿರ್ಧಾರ ಕೈಗೊಂಡು ಕುಟುಂಬ ಶೋಕಸಾಗರದಲ್ಲಿ ಮುಳುಗುವಂತಾಗಿದೆ.

ಶಾಸಕ ಕೆ. ಗೋಪಾಲ ಪೂಜಾರಿ ಮೃತನ ಮನೆಗೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಡಿಶನಲ್ ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಕೊಲ್ಲೂರು ಠಾಣಾಧಿಕಾರಿ ಶೇಖರ್ ಹಾಗೂ ಕೆಎಂಸಿಯ ವೈದ್ಯರ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version