Kundapra.com ಕುಂದಾಪ್ರ ಡಾಟ್ ಕಾಂ

ಬೋರ್ಡ್ ಹೈಸ್ಕೂಲ್ ಮೈದಾನವನ್ನು ಮುಸ್ಲಿಂ ಪ್ರಾರ್ಥನಾ ಕೇಂದ್ರವಾಗಿಸುವ ಹುನ್ನಾರ: ಬಜರಂಗದಳ ಖಂಡನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಮಧ್ಯಭಾಗದಲ್ಲಿರುವ ಬೋರ್ಡ್ ಹೈಸ್ಕೂಲ್ ಮೈದಾನವನ್ನು ಪ್ರಾರ್ಥನಾ ಕೇಂದ್ರವಾಗಿ ಪರಿವರ್ತಿಸುತ್ತಿರುವುದಲ್ಲದೇ ಮುಸ್ಲಿಂ ಸಮುದಾಯದ ಖಾಸಗಿ ಸೊತ್ತನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು ಇದನ್ನು ಬಜರಂಗದಳ ಕುಂದಾಪುರ ಘಟಕ ಖಂಡಿಸುತ್ತದೆ ಎಂದು ಬಜರಂಗದಳ ಜಿಲ್ಲಾ ಸಹಸಂಚಾಲಕ ಗಿರೀಶ್ ಕುಂದಾಪುರ ಹೇಳಿದರು.

ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿರುವ ಟಿಪ್ಪು ಸ್ಮಾರಕವಿದ್ದು, ಇಲ್ಲಿ ಮುಸ್ಲಿಂ ಭಾಂದವರು ವರ್ಷಕ್ಕೆ ಎರಡು ಬಾರಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಹೀಗೆಯೇ ಯಾಥಾಸ್ಥಿತಿ ಮುಂದುವರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಸರಕಾರಿ ಶಾಲೆಯ ಜಾಗವನ್ನು ಪ್ರಾರ್ಥನೆ ನಡೆಸುವ ಉದ್ದೇಶಕ್ಕಾಗಿ ಖಾಸಗಿ ಸೊತ್ತನ್ನಾಗಿಸಿಕೊಳ್ಳುವ ಕಾರ್ಯಕ್ಕೆ ಮುಂದಾದರೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಆರ್‌ಟಿಸಿ ತಿದ್ದುವ ಪ್ರಯತ್ನ:
ಸಾರ್ವಜನಿಕ ಅಹವಾಲು ಸ್ವೀಕರಿಸಲು ಕುಂದಾಪುರಕ್ಕೆ ಬಂದಿದ್ದ ಸಚಿವ ಪ್ರಮೋದ್ ಮಧ್ವರಾಜ್ ಬಳಿ ಕೆಲ ಮುಸ್ಲಿಂ ಮುಖಂಡರು ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಮೂಲ ಅಡಂಗಲ್ ದಾಖಲೆಯಲ್ಲಿ ಶಾಲಾ ಜಾಗವೆಂದೇ ನಮೂದಾಗಿತ್ತು. ನಂತರದಲ್ಲಿ ಕೈಬರವಣಿಗೆ ಮೂಲಕ ಅದನ್ನು ಈದ್ಗಾ ಎಂದು ತಿದ್ದಲಾಗಿದೆ. ನಂತರ ಬಂದ ಕೈಬರಹದ ಆರ್‌ಟಿಸಿಯಲ್ಲಿ ಶಾಲಾ ಜಾಗವೆಂದು, ತದನಂತರದ ಕಂಪ್ಯೂಟರ್ ಆರ್‌ಟಿಸಿಯಲ್ಲಿ ಸರಕಾರ ಎಂದು ನಮೂದಾಗಿದೆ. ಒಂದು ದಾಖಲೆಯಿಂದ ಇನ್ನೊಂದು ದಾಖಲೆಗೆ ವರ್ಗಾಯಿಸಲ್ಪಡುವಾಗ ಸರ್ವೇ ನಂಬರ್ ಅದೇ ಇದ್ದಾಗಿಯೂ ಕೂಡ ಸ್ಥಳದ ಹೆಸರು ಮಾತ್ರ ಬದಲಾವಣೆಗೊಳ್ಳುತ್ತಿರುವುದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಅವರು ದೂರಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಶಾಲಾ ಮೈದಾನವನ್ನು ಈದ್ಗಾ ಮೈದಾನ ಎಂದು ಹೆಸರಿಸಲಾಗುತ್ತಿದೆ. ಇಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಸುಮಾರು 2000ವಿದ್ಯಾರ್ಥಿಗಳು ಧರ್ಮ ಭೇದ ಮರೆತು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ವಠಾರ ಈದ್ಗಾ ಮೈದಾನವಾಗಿ ಪರಿವರ್ತಿಸಲು ವಿರೋಧವಿದೆ. ಈ ಮೊದಲು ನಡೆದುಬಂದ ಯಥಾಸ್ಥಿತಿ ಹಾಗೆಯೇ ಮುಂದುವರಿಯಲಿ. ಅದನ್ನು ಬಿಟ್ಟು ಶಾಲೆಯ ಮೈದಾನದ ಜಾಗವನ್ನೇ ಈದ್ಗಾ ಮೈದಾನಕ್ಕೆಂದು ಪ್ರತ್ಯೇಕವಾಗಿ ಬಿಟ್ಟುಕೊಡುವುದಾದರೆ ಕಾನೂನು ಹೋರಾಟಕ್ಕೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಎಸಿಯವರಿಗೆ ಮೌಖಿಕವಾದ ದೂರನ್ನು ಕೊಟ್ಟಿದ್ದೇವೆ. ಸಂವಿಧಾನಕ್ಕೆ ವಿರುದ್ದವಾಗಿ ಸರಕಾರಿ ಶಾಲೆಯಲ್ಲಿರುವ ಸ್ಥಳವನ್ನು ಧಾರ್ಮಿಕ ಕೇಂದ್ರ ಮಾಡಹೊರಟರೆ ಬಜರಂಗದಳ ಕುಂದಾಪುರ ಘಟಕ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.ಕುಂದಾಪುರ ಬಜರಂಗ ದಳ ಸಂಚಾಲಕ ದಿನೇಶ್, ಹಿಂದೂ ಜಾಗರಣಾ ವೇದಿಕೆ ಮುಖಂಡ ಶಂಕರ್ ಅಂಕದಕಟ್ಟೆ ಇದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version