Kundapra.com ಕುಂದಾಪ್ರ ಡಾಟ್ ಕಾಂ

ಸಂಘಟನೆಯಿಂದ ಸಬಲೀಕರಣ ಸಾಧ್ಯ: ನಿವೃತ್ತ ಮುಖ್ಯೋಪಾಧ್ಯಾಯಿನಿ ವಸಂತಕುಮಾರಿ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಘಟನೆಯಿಂದ ಮಹಿಳೆಯರು ಸಬಲರಾಗುವುದು ಸಾಧ್ಯ. ಹಾಗೆ ಸಬಲರಾದರೆ ಮಾತ್ರ ಸಮುದಾಯದ ಪ್ರಧಾನ ವಾಹಿನಿಗೆ ಬರಬಹುದು. ಸಂಘಟನೆಯಲ್ಲಿ ಒಗ್ಗಟ್ಟು ಸಾಧಿಸುವುದು ಅದರ ಅಸ್ತಿತ್ವಕ್ಕೆ ತೀರ ಅಗತ್ಯ ಎನ್ನುವುದನ್ನು ಮಹಿಳೆಯರು ಸದಾ ನೆನಪಿಟ್ಟುಕೊಳ್ಳಬೇಕು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ ಹೇಳಿದರು.

ಮರವಂತೆಯಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ಸ್ನೇಹಾ ಮಹಿಳಾ ಮಂಡಲವನ್ನು ರವಿವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು. ಮಹಿಳಾ ಸಂಘಟನೆ ಸಮಾಜಕ್ಕೆ ಕೊಡುಗೆ ನೀಡುವುದು ಸಾಧ್ಯ ಎನ್ನುವುದನ್ನು ಮಹಿಳಾ ಮಂಡಲ ತೋರಿಸಿಕೊಡಬೇಕು. ಪರಿಸರದ ಸ್ವಚ್ಛತೆ ಅದರ ಆದ್ಯತೆಯ ವಿಷಯವಾಗಬೇಕು ಎಂದು ಅವರು ನುಡಿದರು.

ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಅಧ್ಯಾಪಕಿ ಡಾ. ಯಶೋಧಾ ಕರನಿಂಗ ಹಿಂದೆ ಮೇಲಿನ ಸ್ತರದಲ್ಲಿದ್ದ ಕೆಲವೇ ಮಹಿಳೆಯರ ಸಾಧನೆಯನ್ನು ಉಲ್ಲೇಖಿಸಿ ಸಮಾಜದಲ್ಲಿ ಸ್ತ್ರೀಯರಿಗೆ ಮಹತ್ವದ ಸ್ಥಾನವಿತ್ತು ಎನ್ನಲಾಗುತ್ತಿದೆ. ಆದರೆ ಎಲ್ಲ ಕಾಲದಲ್ಲೂ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಇಂದೂ ಮಹಿಳಾ ಶೋಷಣೆ ವಿಭಿನ್ನ ಸ್ವರೂಪದಲ್ಲಿ ನಡೆಯುತ್ತಲೇ ಇದೆ. ಶಿಕ್ಷಣ ಬಹುಮಟ್ಟಿಗೆ ಬದಲಾವಣೆ ತಂದಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸುಗುಣಾ ಕೆ. ಎ. ಶುಭ ಹಾರೈಸಿದರು. ಉಪಾಧ್ಯಕ್ಷೆ ಜ್ಯೋತಿ ಎಸ್. ಸ್ವಾಗತಿಸಿದರು. ಸುಶೀಲಾ ಪ್ರಸ್ತಾವನೆಗೈದರು. ಭಾಗ್ಯಲಕ್ಷ್ಮೀ ವಂದಿಸಿದರು. ಜ್ಯೋತಿ ಗಾಂಧಿನಗರ ನಿರೂಪಿಸಿದರು.

Exit mobile version