ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ವಿಶ್ವದ ಮುಂಚೂಣಿ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವದ ಸಫಲತೆಗೆ ದೇಶದ ಜನಸಾಮಾನ್ಯರಲ್ಲಿನ ನಾಯಕತ್ವ ಕಾರಣವಾಗಿದೆ. ವಿದ್ಯಾರ್ಥಿದಿಸೆಯಿಂದಲೇ ನಾಯಕತ್ವ ಗುಣಗಳು ಬೆಳೆಯಬೇಕು. ಅದಕ್ಕೆ ಶಾಲಾ ಸಂಸತ್ತುಗಳು ಪೂರಕವಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಹೇಳಿದರು.
ಅವರು ಕುಂದಾಪುರದ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ, ಸಂವಿಧಾನದ ರಕ್ಷಣೆ ಪ್ರತಿಯೋಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗ ವ್ಯವಸ್ಥೆಯ ಅರಿವನ್ನು ವಿದ್ಯಾರ್ಥಿಗಳು ಹೊಂದಬೇಕು. ಒಂದು ಮತವೂ ಕೂಡಾ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯ ಹಾಗೂ ನಿರ್ಣಯಕವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಛಲ ಇರಬೇಕು. ನಿರ್ದಿಷ್ಟ ಗುರಿ ಹೊಂದಬೇಕು, ಗುರಿಗಾಗಿ ತುಡಿಯುವ ಮನಸ್ಸು ಇರಬೇಕು. ನಾಯಕತ್ವ ಗುಣವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು. ಸತ್ಪ್ರಜೆಗಳಾಗಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಕೆ.ಜಯಣ್ಣ ಅವರು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿ, ಸಂಚಾರ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸುವುದರಿಂದ ಅಪಘಾತದಿಂದ ಮುಕ್ತರಾಗಲು ಸಾಧ್ಯ ಎಂದರು.
ವಿಧ್ಯಾರ್ಥಿ ಸರಕಾರದ ಅಧ್ಯಕ್ಷರಾಗಿ ರೇವಿನಾ ಎರಲ್ಡ್ ಡಿಸೋಜ ಕಾರ್ಯದರ್ಶಿಯಾಗಿ ರಚನಾ ಪೈ ಹಾಗೂ ಮಂತ್ರಿ ಮಂಡಲದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹೋಲಿ ರೋಜರಿ ಚರ್ಚ್‌ನ ಧರ್ಮಗುರುಗಳಾದ ಫಾ|ಅನಿಲ್ ಡಿಸೋಜ ಪ್ರಮಾಣ ವಚನ ಭೋದಿಸಿ, ಶುಭ ಹಾರೈಸಿದರು. ಕುಂದಾಪುರದ ವೃತ್ತ ನಿರೀಕ್ಷಕರಾದ ದಿವಾಕರ್, ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಅಮೃತ್ ಮಾರ್ಟಿಸ್, ಉಪಪ್ರಾಂಶುಪಾಲರಾದ ಮಂಜುಳಾ ನಾಯರ್, ಹಾಗೂ ರವಿ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಆಯಯ್ಕೆಗೊಂಡ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ವಿಲ್ಮಾ ಫೆರ್ನಾಂಡೀಸ್ ಕಾರ್ಯಕ್ರಮ ನಿರ್ವಹಿಸಿ, ಕನ್ನಡ ಉಪನ್ಯಾಸಕ ನಾಗರಾಜ ಸನ್ಮಾನಿತರ ಪರಿಚಯಿಸಿ, ವಿದ್ಯಾರ್ಥಿ ಸಂಸತ್ ಕಾರ್ಯದರ್ಶಿ ರಚನಾ ಪೈ ವಂದಿಸಿದರು.