ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ.
ಎಂಥ ಮಳೆ ಮರ್ರೆ. ಕೌಂಚ್ ಮನಿಕಂಡ್ರೆ ಇತ್ತಲೆ, ಒಂದ್ ಕೋರ್ಜಿ ನಿದ್ರಿ ಮಾಡ್ಲಕ್ ಅಲ್ದೆ. ಮನಿ ಹಂಚಿನ್ ಮೇಲೆ ಬಿದ್ದ್ ನೀರು, ಹನಿ-ಹನಿಯಾಯಿ ನೆಲ ಸೇರ್ವತಿಗೆ, ಮಳೆಗಾಲದ ಹಳಿ ನೆನ್ಪ್ ಕಣ್ಣಂಚಗೆ ಹನಿ ಹನಿಯಾಯಿ ತೇಲುಕೆ ಶುರು ಆತಿತ್ತ್. ಆ ಹನಿ ತುಂಬಾ ಹರ್ಕಟಿ ಚಡ್ಡಿ ಹೈಕಂಡ್ ಓಡಾಡದ್ ನೆನ್ಪೇ ತುಂಬಿತ್. ಒಂದ್ ದಿನ ಹೀಂಗೂ ಅಯ್ತ್.
ಆ ದಿನ ಸನಿವಾರ. ಶಾಲ್ಯಗ್ ಬಾಲ ಸಭೆ ಮುಗ್ಸಂಡ್, ಬೇಗ ಓಡಿ ಮನೆಗೆ ಬಂದಿ. ಶನಿವಾರ ಒಪ್ಪತ್ತ್ ಅಂದೆಳಿ ಮನೆಗೆ ಬೆಳ್ತಕ್ಕಿ ಅನ್ನ ಮಾಡಿದಿರ್. ಮನಿಲ್ ಬೆಣ್ತಕ್ಕಿ ಕೂಳ್ ಮಾಡುದೆ ಅಪರೂಪ, ನಾವ್ ಬಿಡತ್ತಾ, ಸಮಾ ಹಯ್ಕಂಡ್, ಒಂದ್ ಚ್ವಾಂಕಿ ತಿಂದಿ. “ಆವ್…” ಒಂದು ಒಳ್ಳೆ ತೇಗು ಬಂದ್ಮೇಲೆ, ಎದ್ದು ಹಂಚಿಮನಿ ಮಾವಿನ ಮರದ ಹತ್ರ ಓಡುಕ್ ಶುರು ಮಾಡಿದಿ. ಅವರ ಮನೆ ಮಾಯಿನ್ ಮರದ್ ಬುಡ್ದಗ್ ನಿಂತ್ಕ್ಂಡ್, ಎಷ್ಟೊತ್ತಿಗೆ ಮಾವಿನ ಹಣ್ಣು ಬೀಳತ್ತೋ, ಯಾವ ಬದ್ಯಂಗ್ ಬೀಳತ್ತ್, ಅಂದೆಳಿ ಕಾಯ್ತಾ ಕೂಕಂಡಿರತ್ತ್. ಮಾಯಿನ ಹಣ್ಣು ಬಿತ್ತಾ, ಹಿಂದೆ-ಮುಂದೆ ಕಾಣ್ದೆ ಅವನನ್ನ ಇವ ಹಿಂದಾಕಿ, ಇವನನ್ ಅವ ದೂಡಿ ಕಷ್ಟ ಪಟ್ಟ್ ಓಡಿ ಹೊಯಿ ಮಾವಿನ ಹಣ್ಣನ್ನ ಹೆಕ್ತಿತ್ತ್. ನಮ್ಗೆ ಆ ಮಾಯಿನ್ ಹಣ್ಣು ಸಿಕ್ರೆ, ಒಲಂಪಿಕ್ಸ್ ಚಿನ್ನ ಸಿಕ್ಕದ ಹಂಗೆ. ಉಳ್ದವರ್ ಎಲ್ಲ ನೋಕಟ್ ಬಿಡ್ವತಿಗೆ, ಮಾವಿನ ಹಣ್ಣನ್ನ ನೆಕ್ಕುದ್ ಇತ್ತಲ, ಮಾವಿನ ಹಣ್ಣು ಹುಳಿ ಇದ್ರೂ, ನಾವು ತಿಂಬುದ್ ಕಂಡು ಉಳಿದವರು ಹೊಟ್ಟೆ ಉರ್ಕಂಬುದ್ ಇತ್ತಲಾ, ಆಗಳಿಕೆ ಮಾಯಿನಹಣ್ಣು ಸಿಹಿ-ಸಿಹಿ ಜಾಮೂನ್ ಕಂಡೆಗ್ ಇರ್ತಿದಿತ್. ಅಲ್ಲಿಗ್ ಮುಗಿಲ್ಲ. ಎಲ್ಲ ಸೇರಿ ಯಕ್ಷಗಾನ ಮಾಡುವ ಅಂದೆಳಿ ತಿರ್ಮಾನು ಮಾಡ್ತ್. ಮಾವಿನ ಹಣ್ಣು ಬಿದ್ದದ್ದನ್ನ ಹೆಕ್ಕಿ ಇಟ್ಟ್, ಕಡಿಕೆ ಎಲ್ಲರೂ ಒಟ್ಟಿಗೆ ತಿಂಬುವ ಅಂದೆಳಿ ತೀರ್ಮಾನು ಆದ್ ಮೇಲೆ, ಯಕ್ಷಗಾನ ಮಾಡುಕೆ ಶುರು ಮಾಡ್ತ್.
“ಬಲ್ಲಿರೆನಯ್ಯಾ..?” “ಇರುವಂತಹ ಸ್ಥಳ..” “ಹಂಚಿಮನೆ ಮಾವಿನ ಮರ.. ” “ಯಾರಂತ ಕೇಳಿದ್ದೀರಿ…?” ಯಾರಂತ ಕೆಂಡದ್ದ್ ಅಷ್ಟೆ ಜೋರ್ ಮಳಿ ಬಪ್ಪುಕ್ ಶುರು ಆಯ್ತ್. ಆ ಗಾಳಿಗೆ ಮಾವಿನ ಹಣ್ಣು ಬೀಳುಕ್ ಶುರು ಆಯ್ತ್. ಇನ್ನೂ ಸ್ವಲ್ಪ ಹೊತ್ತ್ ಇಲ್ಲೇ ಇದ್ರೆ ಇನ್ನೂ ಜಾಸ್ತಿ ಮಾವಿನ ಹಣ್ಣು ಸಿಕ್ಕತ್ತ್ ಅನ್ನೋ ಲೆಕ್ಕಾಚಾರದೆಗೆ ಅಲ್ಲೇ ಆ ಮಳೆಗೆ ಯಕ್ಷಗಾನ ಮುಂದುವರ್ಸ್ತ್. ಕೆಲವರು ಮಳಿ ಬಂದಕೂಡ್ಲೆ ಮನಿ ಬದಿಗ್ ಓಡಿ ಹ್ವಾರ್. ನಾನು, ಪಾಂಡ ಮಾತ್ರ ಅಲ್ಲೇ ಇನ್ನೂ ಕೊಣಿತ ಅಯ್ಕಂತ್. ಬಡ್ಡಿಮಗ ಗಿರ್ಕಿ ಮೇಲೆ ಗಿರ್ಕಿ ಹಾಕುಕ್ ಶುರು ಮಾಡಿದ. ಅವ ಪ್ಯಾಂಟ್ ಹಯ್ಕಬಂದಿದ, ನಾನ್ ಅದೇ ಶಾಲಿ ಕಾಕಿ ಬಟ್ಟೆ ಚಡ್ಡೆಗೆ ಬಂದಿದಿ. ಆದ್ರೂ ಸುಮ್ನೆ ಸೋಲು ಒಪ್ಪ್ಕಂಬುಕ್ ಆತ್ತಾ..? ನಾನು ಬಿಡ್ಲಿಲ್ಲ, ಗಿರ್ಕಿ ಮೇಲೆ ಗಿರ್ಕಿ ಸುತ್ತುಕ್ ಶುರು ಮಾಡಿದೆ. ಮಳೆ ಜೋರ್ ಬಪ್ಪುಕ್ ಶುರು ಆಯ್ತ್. ನಾವೂ ಕೊಣ್ದ್-ಕೊಣ್ದ್ ಸುಸ್ತ್ ಆಯ್ತ್. ಇನ್ನೆಂತ ಮಾಡುದ್ ಅಂದೆಳಿ ಮಾವಿನ ಹಣ್ಣನ್ನ ಪಾಲ್ ಮಡ್ಕಂಡ್ ಮನಿಗೆ ಹೊಯ್ತ್. ಕುಂದಾಪ್ರ ಡಾಟ್ ಕಾಂ ಅಂಕಣ.
ಮನಿ ಒಳಗೆ ಕಾಲ್ ಹಾಕ್ತ್ ಇದ್ದಂಗೆ, ಉದ್ದ ಕೋಲ್ ಹಿಡ್ಕಂಡ್ ಅಮ್ಮ ಕಾಯ್ತ ಇದ್ದಳ್. ನಿಂಗೆ ತಕಂಡ್ ಹ್ವಾತ್ತಾ..? ಈ ಪಾಟಿ ಮಳೆಗೆ, ಇಷ್ಟೊತ್ತೊರಿಗೆ ಸೊಕ್ಕತೆ ಆಯ್ಕಂಡಿದೆಯಲೆ, ನಾಳಿಗ್ ಜ್ವರ ಬಂದ್ರೆ ಶಾಲೀಗ್ ಯಾರ್ ನಾನ್ ಹ್ವಾಪುದಾ..? ಅದು ಅಲ್ಲದೆ ಆ ಕಾಕಿ ಬಟ್ಟಿ ಚಡ್ಡಿನ ಈ ಪಾಟಿ ಗಲೀಜ್ ಮಾಡ್ಕಂಡ್ ಬಂದಿದ್ಯಲಾ ಅದನ್ನ ಯಾರ್, ನಿನ್ನ ಅಜ್ಜ ಒಗಿತ ಅಂದೆಳಿ ಮಾಡಿದೆ ?.” ಅಂದೆಳಿ ಹೊಡುಕ್ ಬಂದಳ್, ನಾನ್ ಮತ್ತೆ ಮನಿಯಿಂದ ಹೊರಗಡೆ ಓಡಿ ಬಂದಿ. “ಹಪ್ಪ್ ಹಿಡದ್ದೆಲೊ, ಒಳಗ್ ಬಾ.. ಹೊಡಿತಿಲ್ಲ, ಬೇಗೆ ಒಳಗ್ ಬಂದ್ ಮಿಂದಕಂಡ್ ಬಟ್ಟೆ ಬೇರೆ ಹೈಕೊ. ಬೇಗೆ..” ಅಂದೆಳಿ ಕೋಲ್ ಬಿಸಾಕದಳ್ ಅಮ್ಮ. ಅಯ್ಯಬ್ಬ ಅಂದೆಳಿ, ಕೂಡ್ಲೆ ಮೀವರಿ ಹತ್ರ ಓಡಿ ಹೊಯಿ, ಮೀಯು ಶಾಸ್ತ್ರ ಮಾಡಿ ಬಂದನಿಗೆ, ತಲಿ ಎಲ್ಲ “ಬಾರು” ಆಪೂಕ್ ಶುರು ಅಯ್ತ್. ಅಮ್ಮಂಗೆ ಹೇಳ್ರೆ, ಮತ್ತೆ ಸಹಸ್ರನಾಮ ಅರ್ಚನೆ ಮಾಡ್ತಳ್ ಅಂದೆಳಿ, ಪಡುಬದಿ ಕೋಣೆಗೆ ಹೊಯಿ, ಮುಚ್ಚಹಯ್ಕಂಡ್ ಮನಿಕಂಡಿ. ಮನಿಕಂಡನಿಗೆ ತಕೊ, ಬಿಡ್ಬೆಡಾ.. ಚಳಿ ಜ್ವರ, ಕಂಡಪಟ್ಟಿ ಜ್ವರ. ಇವತ್ತ್ ನನ್ನ ವಾಲಿಕಳಿತ್ ಅಂದೆಳಿ, ಕೂಡ್ಲೆ ಅಮ್ಮನ ಕೂಗದೆ. ಅಮ್ಮ ಬಂದಳ್, ಮಂಡಿ ಮುಟ್ಟಿ ಕಂಡಳ್, “ಅಯ್ಯೊ ದೇವರೆ, ಮೈ ಕೈಯಲ್ಲ ಸುಡತ್ತಲೇ, ನಿಂಗ್ ಎಷ್ಟ್ ಹೆಳ್ರೂ ಇಲ್ಲ, ಕೆಂತ್ಯಾ ನನ್ನ ಮಾತನ್ನ, ಈಗ ಅನುಭವಿಸು..” ಇನ್ನೂ ಏನೇನೋ ಹೇಳುಕ್ ಶುರು ಮಾಡ್ದಳ್, ನಂಗೆ ಯಾವ್ದೂ ಸರಿಯಾಗಿ ಕೆಂತಿರ್ಲಿಲ್ಲ. ಕೂಡ್ಲೆ ಒಂದು ಬಟ್ಟಿನ ಚಂಡಿ ಮಾಡಿ ಹಣಿ ಮೇಲೆ ಇಟ್ಟಳ್. ಪಕ್ಕದ ಮನೆಯರ್ ಯಾರೋ ಪ್ಯಾಟಿಗ್ ಹ್ವಾಪರ್ ಹತ್ರ ಜ್ವರಕ್ಕೆ ಮಾತ್ರೆ ತುಪ್ಪುಕ್ ಹೇಳಿಯೂ ಆಯ್ತ್. ನಾನ್ ಮುಚ್ಕ್ ಹಯ್ಕಂಡ್ ಮನಿಕಂಡನಿಗೆ ಇತ್ತಿನ್ ಗೋಷ್ಟಿಯೇ ಇಲ್ಲ. ಸಾಯಂಕಾಲ ಖಿಗಿ ಕಾಂಬುಕೆ ಪಾಂಡ ಬಂದು ನನ್ನ ಎಬ್ಬಿಸಿದ ಮೇಲೆ ನಂಗೆ ಎಚ್ಚರ ಆದ್ದ್. ಪಾಂಡನ್ನ ಕಂಡ ಕೂಡ್ಲೆ ಮತ್ತೆ ಸಿಟ್ಟ್ ಬಂತ್. ಅವ್ನು ನನ್ನ ಅಷ್ಟೆ ಮಳೆಗೆ ನೆನೆದಿದ. ಅವ ಮಾತ್ರ ಸರಿಯಾಗಿ ಇದ್ದ, ನಂಗೆ ಮಾತ್ರ ಜ್ವರ ಬಂದದ್ದ್. ಯಾಕೆ? ಅವ್ನಿಗೂ, ನಾನ್ ಎಂತ ಯೋಚ್ನಿ ಮಾಡ್ತಿದ್ದಿ ಅಂದೆಳಿ ಗೊತ್ತಾಯ್ತ್. “ಕಂಡ್ಯಾ.. ನಂಗೆ ಯಂತದು ಅಯ್ಲಾ.. ನೀನ್ ಎಲ್ಲರ್ ಎದ್ರಗಡೆ, ಮಾವಿನ ಹಣ್ಣ್ ತಿಂದ್, ಎಲ್ಲರ್ ಹೊಟ್ಟಿ ಉರ್ಸೀದ್ಯಲ, ಅದಕ್ಕೆ ನಿಂಗೆ ಜ್ವರ ಬಂದದ್ದ್. ನಮ್ಮೆಲ್ಲರ ಶಾಪ ನಿಂಗೆ ತಟ್ಟತ್ ಕಂಡ್ಯಾ.. ನಾವೆಲ್ಲ ರಾತ್ರಿಗೆ ದೇವಸ್ಥಾನದ ಪೂಜಕ್ಕೆ ಹ್ವಾತ್ತ್, ನೀನ್ ಮನೆಗೆ ಮನಿಕೋ…” ಬಡ್ಡಿಮಗ, ಉರಿತಿಪ್ಪು ಗೆಂಡಕ್ಕೆ, ಇನ್ನೂ ತುಪ್ಪ ಸುರ್ದಿಕೆ ಹ್ವಾದ. ಅಲ್ಲ ಮರ್ರೆ, ಈ ಶಾಪ-ಗೀಪ ಎಲ್ಲ ಹ್ವೌದ ಹಂಗಾರೆ..? ಅದು ಏನೇ ಇರ್ಲಿ, ನೀವು ನನ್ನ ಕಂಡೆಗೆ ಈ ಮಳೆಗೆ ನೆನದ್, ಇಲ್ಲ-ಸಲ್ಲದ ಖಾಯಿಲೆ ತಕಣ್ಬೆಡಿ. ಮನೆಗೆ ಬೆಚ್ಚೆಗೆ ಅಕ್ಕಿ ಹಪ್ಪಳ್ವೋ, ಉದ್ದಿನ ಹಪ್ಪಳ್ವೋ ತಿಂದು, ತೇವುಡ್ಕಣಿ ಆಗ್ದಾ..?/ಕುಂದಾಪ್ರ ಡಾಟ್ ಕಾಂ ಅಂಕಣ./