Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಡಿವೈಎಸ್ಪಿ ಸಾವಿನ ನೈತಿಕ ಹೊಣೆಹೊತ್ತು ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಎಬಿವಿಪಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಕಿರುಕುಳ ನೀಡಿದರೆನ್ನಲಾದ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯದ ಸಚಿವ ಕೆ.ಜೆ. ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ನಿರಂತರ ಕಿರುಕುಳ ನೀಡಿರುವ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ದಕ್ಷ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ತನ್ನ ಸಾವಿಗೆ ಕಾರಣವಾದವರ ಹೆಸರನ್ನು ನೇರವಾಗಿಯೇ ಪ್ರಸ್ತಾಪಿಸಿದ್ದರೂ ಸರಕಾರ ಇಲ್ಲಸಲ್ಲದ ಕಾರಣವನ್ನು ನೀಡಿ ಪ್ರಕರಣದ ಹಾದಿ ತಪ್ಪಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಕೇಸು ದಾಖಲಿಸಿ:
ಸಮಾಜದಲ್ಲಿ ಎಲ್ಲರಿಗೂ ಒಂದೇ ತರಹದ ನ್ಯಾಯವಿದ್ದು, ಮೃತರ ಪತ್ನಿ ಹಾಗೂ ಪುತ್ರ ನೀಡಿರುವ ಕೇಸನ್ನು ದಾಖಲಿಸಿ ವಿಚಾರಣೆಗೊಳಪಡಿಸಬೇಕು ಅಲ್ಲದೇ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಎಬಿಪಿವಿ ಆಗ್ರಹಿಸಿದೆ.

ಕಾಲೇಜಿನಿಂದ ವಿನಿವಿಧಾನಸೌಧದ ವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಬಳಿಕ ತಹಶೀಲ್ದಾರ್ ಕಿರಣ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿಯ ಪುನಿತ್‌ರಾಜ್ ಶೆಟ್ಟಿ, ದೀಕ್ಷಿತ್, ವೈಭವ್, ನವೀನ್, ಸಚಿನ್ ಪೂಜಾರಿ, ಸುಹಾಸ್, ಸುಶಾಂತ್, ನಾಗರಾಜ, ಸನತ್, ಪ್ರದೀಪ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಎಬಿವಿಪಿ ರಾಜ್ಯಾದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

Exit mobile version