Kundapra.com ಕುಂದಾಪ್ರ ಡಾಟ್ ಕಾಂ

ವೃದ್ಧ ದಂಪತಿಗಳಿಗೆ ಮನೆ ನಿರ್ಮಿಸಿಕೊಟ್ಟು ಆಸರೆಯಾದ ಕೋಟೇಶ್ವರ ಗಾಣಿಗ ಯುವ ಸಂಘಟನೆ

????????????????????????????????????

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಬಿರುಗಾಳಿಗೆ ಕುಸಿದು ಬಿದ್ದಿದ್ದ ಮನೆಯ ಮತ್ತೆ ಎದ್ದು ನಿಂತಿದೆ. ಮನೆಯಿಲ್ಲದೇ ಮುಂದೇನು ಎಂಬ ಕುಳಿತಿದ್ದ ವೃದ್ಧ ದಂಪತಿಗಳಿಗೆ ಮತ್ತೆ ಆಸರೆ ದೊರೆತಿದೆ. ಎರಡು ತಿಂಗಳೊಳಗೆ ಮತ್ತೆ ಅದೇ ಜಾಗದಲ್ಲಿ ಮನೆ ಕಟ್ಟಿಕೊಟ್ಟು ಇತರರಿಗೂ ಮಾದರಿಯಾಗಿದೆ ಕೋಟೇಶ್ವರ ಗಾಣಿಗ ಯುವ ಸಂಘಟನೆ.

ಕಳೆದ ಮೇ ತಿಂಗಳಲ್ಲಿ ಬೀಸಿದ ಬೀರುಗಾಳಿ ಮಳೆ ಅಬ್ಬರಕ್ಕೆ ಗೋಪಾಡಿ ಕಾಂತೇಶ್ವರ ದೇವಸ್ಥಾನದ ಸಮೀಪದ ಆನಂದ ಗಾಣಿಗರ ಮನೆ ಮೇಲ್ಚವಣಿ ಸಂಪೂರ್ಣ ಕುಸಿದು ಹಾನಿಗೀಡಾಗಿತ್ತು. ಘಟನೆಯಲ್ಲಿ ವೃದ್ಧ ಆನಂದ ಗಾಣಿಗ ಗಂಭೀರ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯನ್ನು ದುರಸ್ತಿಗೊಳಿಸಲಾಗದೇ ವಯೋವೃದ್ಧ ದಂಪತಿಗಳು ಸಂಕಷ್ಟದಲ್ಲಿದ್ದಾಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ನೇತೃತ್ವದಲ್ಲಿ ಸುಮಾರು ಅಂದಾಜು 3.50 ಲಕ್ಷ ಅಂದಾಜಿನಲ್ಲಿ ಮನೆ ಬಿದ್ದ ಜಾಗದಲ್ಲೇ ಪುಟ್ಟದಾದ ಸುಂದರ ಮನೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮತ್ತು ದಾನಿಗಳ ನೆರವಿನಿಂದ ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ.

ಮನೆ ಹಸ್ತಾಂತರ:
ಅದರಂತೆ ನಿಮಾರ್ಣಗೊಂಡ ನೂತನ ಗೃಹ ‘ಶ್ರೀ ವೇಣು ಗೋಪಾಲಕೃಷ್ಣ ನಿಲಯ’ ವೃದ್ಧ ದಂಪತಿಗಳಿಗೆ ಹಸ್ತಾಂತರಿಸಲಾಯಿತು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷರಾದ ಶ್ರೀನಿವಾಸ ಗಾಣಿಗ ಮನೆಯ ಯಜಮಾನ ಆನಂದ ಗಾಣಿಗ ಇವರಿಗೆ ಮನೆಯ ಕೀಲಿ ಕೈಯನ್ನು ನೀಡುವುದರ ಮೂಲಕ ಮನೆಯನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಕೃತಿಕ ವಿಕೋಪ ನಿಧಿಯ ಯೋಜನೆಯಲ್ಲಿ ಹಣ ಮಂಜೂರಾತಿಯಾಗಲು ಸಹಕರಿಸಿದ ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ಪತಿ ಜಿ ಪುತ್ರನ್ ಇವರನ್ನು ಸಂಘಟನೆ ವತಿಯಿಂದ ಗೌರವಿಸಿ ಗುರುತಿಸಲಾಯಿತು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವನಾಂದ ಗಾಣಿಗ ಗಂಗೊಳ್ಳಿ, ಕೋಶಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ನಾಗರಾಜ ಬಿ.ಜಿ, ಕೋಟೇಶ್ವರ ರೋಟರ‍್ಯಾಕ್ಟ್ ಅಧ್ಯಕ್ಷ ರಾಘವೇಂದ್ರ ಬೀಜಾಡಿ ಹಾಗೂ ದಾನಿಗಳು ಉಪಸ್ಥಿತರಿದ್ದರು/ಕುಂದಾಪ್ರ ಡಾಟ್ ಕಾಂ ವರದಿ/

Exit mobile version