ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಎಲ್ಲಾ ಕಾಲದಲ್ಲಿ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಕಳೆದೆರಡು ವರ್ಷ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ ನೊಂದು ಬಂದವರಿಗೆ, ಅನ್ಯಾಯವಾದವರಿಗೆ ನ್ಯಾಯ ಒದಗಿಸುನ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿಯಿದೆ ಎಂದು ನಿರ್ಗಮಿತ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು.
ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆದ ಅವರ ವಿದಾಯಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಷ್ಟೇ ಪ್ರಭಾವಿ ವ್ಯಕ್ತಿಯೂ ಕೂಡಾ ಕಾನೂನಿಗಿಂತ ದೊಡ್ಡವರಲ್ಲ. ಯಾವ ಅಧಿಕಾರಿಯಾಗಿದ್ದರೂ ಸೃಷ್ಠಿಯ ನಿಯಮ ಮೀರಲು ಸಾಧ್ಯವಾಗದು. ಅನುಭವ ಜೀವನದ ಪಾಠ ಕಲಿಸುತ್ತದೆ. ಹಿರಿಯರಿಗೆ, ಮಹಿಳೆಯರಿಗೆ, ಕಾನೂನನ್ನು ಗೌರವಿಸುವುದು ನಮ್ಮ ದೇಶದ ಸಂಸ್ಕೃತಿ. ನಮ್ಮ ಕೆಳಗಿನ ಅಧಿಕಾರಿಗಳನ್ನು ಕೂಡಾ ಕೀಳಾಗಿ ಕಾಣುವುದು ಮೇಲಾಧಿಕಾರಿಗಳ ವ್ಯಕ್ತಿತ್ವಕ್ಕೆ ಶೋಭೆತರದು ಎಂದ ಅವರು ಇಂದಿನ ವ್ಯವಸ್ಥೆಯಲ್ಲಿ ಪೋಲಿಸರು ಜನಸ್ನೇಹಿಯಾಗಿ ಕರ್ತವ್ಯ ಪಾಲಿಸಬೇಕಾಗುತ್ತದೆ. ಸಾಮರಸ್ಯ, ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಆರಕ್ಷಕರು ಪ್ರಥಮ ಆದ್ಯತೆ ನೀಡುವುದರ ಮೂಲಕ ಸಾರ್ವಜನಿಕರ ವಿಶ್ವಾಸಗಳಿಸುವಂತಾಗಬೇಕು ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಬೈಂದೂರು, ಕೊಲ್ಲೂರು, ಗಂಗೊಳ್ಳಿ ಠಾಣಾ ಸಿಬ್ಬಂದಿಗಳು ಸುದರ್ಶನ್ ಮುದ್ರಾಡಿಯವರನ್ನು ಸನ್ಮಾನಿಸಿ ಗೌರವಿಸಿದರು. ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಕಾಂಗ್ರೆಸ್ ಮುಖಂಡ ರಿಯಾಜ್ ಅಹ್ಮದ್, ಪಡುವರಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಪಡುವರಿ, ಗಂಗೊಳ್ಳಿ ಠಾಣಾ ಹೆಡ್ ಕಾನ್‌ಸ್ಟೇಬಲ್ ಆನಂದ್, ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿ ದಯಾನಂದ್ ನಿರ್ಗಮಿತ ವೃತ್ತ ನಿರೀಕ್ಷಕರಿಗೆ ಶುಭಹಾರೈಸಿದರು.
ನರಸಿಂಹ ಬಿ. ನಾಯಕ್ ಪ್ರಾರ್ಥಿಸಿದರು. ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಗಂಗೋಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಉಪಸ್ಥಿತರಿದ್ದರು. ಅರುಣ್‌ಕುಮಾರ್ ನಿರೂಪಿಸಿ, ವಂದಿಸಿದರು.