ಎ.ಎಸ್.ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಲಂಗು, ಲಗಾಮು ಇದೆಯೇ? ಭಾರತದ ಸಂವಿಧಾನವೇ ತನ್ನ 19ನೇಯ ವಿಧಿಯಡಿಯಲ್ಲಿ ಮೂಲಭೂತ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು ಎಂದು ಘೋಷಿಸಿದೆ – ಸಂರಕ್ಷಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಬರೇ ಪುಸ್ತಕ ಬರೆಯುವುದು, ನಾಟಕ ರಚಿಸುವುದು, ಕವಿತೆ ಹಾಡುವುದು, ಭಾಷಣ ಮಾಡುವುದು ಮಾತ್ರವಲ್ಲ – ಪತ್ರಿಕಾ ಸ್ವಾತಂತ್ರ್ಯ ಸಹ ಅದರಲ್ಲಿ ಸೇರಿರುತ್ತದೆ.
ಆದರೆ ಈ ಸ್ವಾತಂತ್ರ್ಯಕ್ಕಿದೆಯೇ ಕಡಿವಾಣ? ಉಂಟು ಎನ್ನುತ್ತದೆ ಕಾನೂನು, ನ್ಯಾಯಾಲಯ. ಸರ್ವೋಚ್ಚ ನ್ಯಾಯಾಲಯ ಸಹ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಸಾಮಾನ್ಯ ಹಕ್ಕು ಆಗಿದ್ದು, ಸಂಸತ್ತು, ವಿಧಾನಸಭೆಯಂತಹ ಸದನಗಳ ಹಕ್ಕುಚ್ಯುತಿ ಸಂದರ್ಭಗಳಲ್ಲಿ ಅವುಗಳ ವಿಶೇಷ ಹಕ್ಕುಗಳ ಎದುರು ಅಭಿವ್ಯಕ್ತಿ ಸ್ವಾತಂತ್ರ್ಯ ತಲೆತಗ್ಗಿಸಬೇಕಾಗುತ್ತದೆ ಎಂದಿದ್ದಾರೆ. ಅಲ್ಲ, ಎಂದವರಿಗೆ ಛೀಮಾರಿ – ನ್ಯಾಯಾಲಯದಿಂದಲ್ಲ – ತಾನೇ ನ್ಯಾಯಾಲಯವಾಗಿ ಕುಳಿತ ಸಂಸತ್ತಿನಿಂದ.
ಎಡಪಂಥೀಯ ಪತ್ರಿಕೆ ಬ್ಲಿಟ್ಜ್ನ ಸಂಪಾದಕರಾಗಿ ಕರಂಜಿಯಾ ಆಡಳಿತಕ್ಕೆ ಸಡ್ಡು ಹೊಡೆದು ನಿಂತವರು. ಅವರ ಲೇಖನಿ ಯಾರಿಗೂ ಹೆದರುತ್ತಿರಲಿಲ್ಲ. ಅತ್ಯಂತ ಹರಿತವಾದ ಅವರ ಬರಹಗಳು ಅಧಿಕಾರದಲ್ಲಿದ್ದವರನ್ನು ಕೊಚ್ಚಿ ಕೊಚ್ಚಿ ಹಾಕುತ್ತಿದ್ದವು. ಇರಾನಿನ ಷಾಗೆ ಹತ್ತಿರದವರಾಗಿದ್ದ ಕರಂಜಿಯಾ ಷಾ ನೀಡಿದ ಆಹ್ವಾನದಂತೆ ಇರಾನಿಗೆ ಹೋಗಿ ರಾಜ ಮರ್ಯಾದೆ ಪಡೆದು ಬಂದವರೆಂದರೆ ಅವರ ಛಾತಿ, ಖ್ಯಾತಿ ಎಷ್ಟಿತ್ತು ಎಂದು ಯಾರೂ ಊಹಿಸಬಹುದು. ಅಷ್ಟಿದ್ದೂ ಕರಂಜಿಯಾ ಎಡವಿದ್ದು ಎಲ್ಲಿ, ಹೇಗೆ?
ಇದು 1961ರ ಸಂಗತಿ. ಪಂಡಿತ್ ಜವಾಹರಲಾಲ್ ನೆಹರು ಆಗಿನ ಪ್ರಧಾನಿ. ವಿ.ಕೆ.ಕೃಷ್ಣ ಮೆನನ್ ರಕ್ಷಣಾಮಂತ್ರಿ. ಬ್ರಹ್ಮಚಾರಿಯಾದ ಈ ಮೆನನ್ ಬಗ್ಗೆ ಆಗಲೇ ಅತಿರಂಜಿತ ಕಥೆಗಳಿದ್ದವು. ಆದರೆ ಮೆನನ್ ತೀಕ್ಷ್ಣ ವಿಚಾರವಾದಿ. ಎಡಪಂಥೀಯ. ಒಳ್ಳೇ ಮಾತುಗಾರ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಭುಟ್ಟೋವನ್ನು ಮೀರಿಸಿ ದಿನಗಟ್ಟಲೆ ಭಾಷಣ ಮಾಡಿ ದಾಖಲೆ ಸೃಷ್ಟಿಸಿದವರು. ನೆಹರೂರವರನ್ನೇ ತನ್ನ ವಿಚಾರದ ಮಾಯಾಜಾಲದಲ್ಲಿ ಕೆಡವಿದವರು. ಹಾಗಾಗಿ ಪ್ರತಿಷ್ಠೆಯ ರಕ್ಷಣಾಮಂತ್ರಿ ಖಾತೆ ಪಡೆದವರು. ಅವರ ಕಾಲದ ಜೀಪು ಹಗರಣ ಈಗಿನ ಬೊಫೋರ್ಸ್ ಹಗರಣದಷ್ಟೆಯೇ ಸುದ್ದಿ ಮಾಡಿತ್ತು. ನೆಹರೂಗೆ ಇದೆಲ್ಲಾ ಗೊತ್ತಿರಲಿಲ್ಲವೆಂದಲ್ಲ – ಮೆನನ್ ಮೇಲಿನ ಮಮತೆಯಿಂದ ಏನೂ ಕ್ರಮ ಕೈಗೊಳ್ಳದೇ ಅವರನ್ನು ಸಹಿಸಿಕೊಂಡಿದ್ದರು.
ಲೋಕಸಭೆಯಲ್ಲಿ ಕೃಪಲಾನಿಯವರು ನೆಹರೂರನ್ನು ರಕ್ಷಣಾ ಇಲಾಖೆ ಹಗರಣದ ಕುರಿತು ಚುಚ್ಚಿದರು. ಕೃಷ್ಣ ಮೆನನ್‌ರನ್ನು ಚಚ್ಚಿ ಬಿಟ್ಟರು. ಮೆನನ್‌ರನ್ನು ಇಂಪೀಚ್‌ಮೆಂಟ್ ಮಾಡಿದ ಭಾಷಣ ಅದಾಗಿತ್ತು. ಇಡೀ ಭಾರತವೇ ಕಂಪಿಸಿದ ರೀತಿಯ ಭಾಷಣವದು. ಸರಕಾರವೇ ನಡುಗಿತ್ತು. ಕುಂದಾಪ್ರ ಡಾಟ್ ಕಾಂ ಅಂಕಣ.
ಆಗ ಮೆನನ್ ನೆರವಿಗೆ ಬಂದವರು ಬ್ಲಿಟ್ಜ್ ಪತ್ರಿಕೆ. ಅದರ 1961 ಎಪ್ರಿಲ್‌ನ ಒಂದು ಸಂಚಿಕೆಯಲ್ಲಿ ದಿಲ್ಲಿಯಿಂದ ರಾಘವನ್ ಕಳುಹಿಸಿದ ಒಂದು ವರದಿಯ ಶೀರ್ಷಿಕೆಯೇ ಕೃಪಲೂನಿ ಇಂಪೀಚಡ್. ಕೃಪಲಾನಿಯನ್ನು ಲೂನಿ (ಹುಚ್ಚ) ಎಂದು ಲೇವಡಿ ಮಾಡಿ, ಅವರನ್ನು ಅವಹೇಳನ ಮಾಡಿ, ನಿಂದಿಸಿ, ಅವರ ಭಾಷಣವನ್ನು ತುಚ್ಛವಾಗಿ ಟೀಕಿಸಿ ಬರೆಯಲಾದ ಈ ಲೇಖನ ಭಾರತದಾದ್ಯಂತ ರೊಚ್ಚು ತರಿಸಿತ್ತು. ಒಂದು ಎಡಪಂಥೀಯ ಪತ್ರಿಕೆ, ಓರ್ವ ಎಡಪಂಥೀಯ ಸಚಿವನ ಸಮರ್ಥನೆಗೆ ನಿಂತ ಪ್ರಸಂಗವದು. ಇದರ ಪರಿಣಾಮ ಐತಿಹಾಸಿಕವಾದೀತು ಎಂದು ಸಂಪಾದಕ ಆರ್.ಕೆ.ಕರಂಜಿಯಾ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
1961ರ ಎಪ್ರಿಲ್ 20ರಂದು ಲೋಕಸಭೆಯಲ್ಲಿ ಸಂಸತ್ತ್ ಸದಸ್ಯ ಕುಷ್ಪತ್ ರಾಯ್ ಎಂಬವರು ಈ ಲೇಖನ ಹಿಡಿದುಕೊಂಡು ಇದರಿಂದಾಗಿ ಓರ್ವ ಸದಸ್ಯನ ಹಕ್ಕು ಬಾಧ್ಯತೆ ಉಲ್ಲಂಘನೆಯಾಗಿದೆ, ಇನ್ನು ಮುಂದೆ ಯಾರೂ ಧೈರ್ಯವಾಗಿ ಸಂಸತ್ತಿನಲ್ಲಿ ಭಾಷಣ ಮಾಡುವಂತಿಲ್ಲ ಎಂದು ಹುಯಿಲೆಬ್ಬಿಸಿ ಹಕ್ಕು ಚ್ಯುತಿ ಪ್ರಶ್ನೆ ಎತ್ತಿದರು. ಕೃಪಲಾನಿ ಭಾಷಣ ಅಪ್ಪಟ ಸುಳ್ಳಿನ ಮೇಲೆ ನಿಂತದ್ದು, ನಪುಂಸಕತೆ ಪ್ರದರ್ಶಿಸುವಂತಾದ್ದು, ಕೃಪಲಾನಿ ಅಪಸ್ಮಾರ ಖಾಯಿಲೆ ಬಂದವರಂತೆ ಮಾತಾಡುತ್ತಿದ್ದರು ಎಂದೆಲ್ಲ ಹೀನೈಸಿ ಬರೆಯಲಾಗಿದೆ ಎಂದರು. ಕೆರಳಿದ ಸಂಸತ್ತು ಇದನ್ನು ಹಕ್ಕುಬಾಧ್ಯತೆ ಸಮಿತಿಗೆ ಒಪ್ಪಿಸಿತು. ಕುಂದಾಪ್ರ ಡಾಟ್ ಕಾಂ ಅಂಕಣ.
ಸಮಿತಿ ಕರಂಜಿಯಾಗೆ ನೋಟೀಸು ನೀಡಿತು. ಕರಂಜಿಯಾ ತನ್ನ ಹಕ್ಕೇ ಸರ್ವೋಚ್ಚ ಎಂದು ಸಾಧಿಸಿ ಸಮಜಾಯಿಸಿ ನೀಡಿದರು. ಭಾರತದ ಸಂವಿಧಾನದಲ್ಲಿನ 105(3) ವಿಧಿ ಪ್ರಕಾರದ ಹಕ್ಕುಬಾಧ್ಯತೆಯು ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್‌ನಂತಿದ್ದು ಸಂವಿಧಾನದಲ್ಲಿ ಗಟ್ಟಿಗೊಳಿಸಿದ 19(1) (ಎ)ಯಲ್ಲಿನ ಮೂಲಭೂತ ಹಕ್ಕುಗಳಿಗೆ ಒಳಪಟ್ಟಿರುತ್ತದೆ ಹೊರತು ಮೀರಿ ನಿಲ್ಲುವುದಿಲ್ಲ ಎಂದು ಪ್ರತಿಪಾದಿಸಿದರು. ನೀವು ಕ್ರಮ ಕೈಗೊಂಡರೆ ಅದೇ ಮೂಲಭೂತ ಹಕ್ಕುಗಳ ಗ್ಯಾರಂಟಿ ನೀಡಿದ 19(1)ರ ಉಲ್ಲಂಘನೆಯಾದೀತು ಎಂದು ಸಂಸತ್ತನ್ನೇ ಎಚ್ಚರಿಸಿದರು ಕರಂಜಿಯಾ.
ಆದರೆ ಹಕ್ಕುಬಾಧ್ಯತಾ ಸಮಿತಿ ಕರಂಜಿಯಾರವರ ವಾದವನ್ನು ಒಪ್ಪಲಿಲ್ಲ. ಸರ್ಚ್‌ಲೈಟ್ ಪತ್ರಿಕೆ ಪ್ರಕರಣದಲ್ಲಿ ಈ ಹಿಂದೆ ಸರ್ವೋಚ್ಚ ನ್ಯಾಯಾಲಯವೇ ಹಕ್ಕುಬಾಧ್ಯತೆಗಳು ಅನುಲ್ಲಂಘನೀಯ ಎಂದೂ, ಮೂಲಭೂತ ಹಕ್ಕು ಸಹಾ ಅದಕ್ಕೆ ಒಳಪಟ್ಟಿದೆ ಎಂದೂ ಹೇಳಿದ ಕಾರಣ ನೀವು ತಪ್ಪು ಮಾಡಿದ್ದೀರಿ, ನಿಮ್ಮನ್ನು ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದಿತು. ಸಂಸತ್ತಿಗೆ ವರದಿ ನೀಡಿತು.
ಇಷ್ಟಾದರೂ ಆರ್.ಕೆ.ಕರಂಜಿಯಾ ತಲೆ ಬಾಗಲೇ ಇಲ್ಲ. ಬಂದದ್ದು ಬರಲಿ, ನಾನೇ ಸರಿ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಮೇಲು. ಏನು ಬೇಕಾದರೂ ಮಾಡಿ ಎಂದರು. ಕ್ಷಮೆ ಕೂಡ ಯಾಚಿಸಲು ಒಪ್ಪಲಿಲ್ಲ. ಸರಿ. ಅಭೂತಪೂರ್ವ ಎಂಬಂತೆ ಸಂಸತ್ತು ನ್ಯಾಯಾಲಯವಾಗಿ ಪರಿವರ್ತಿತವಾಯಿತು. ಕರಂಜಿಯಾ ವಿಶೇಷವ್ಯಕ್ತಿಯಾಗಿಬಿಟ್ಟರು. ಇಡೀ ದೇಶ ಈ ಮೊತ್ತಮೊದಲ ಛೀಮಾರಿ ಪ್ರಸಂಗ ಎದುರು ನೋಡಲಾರಂಭಿಸಿದರು. ಸಂಸತ್ತು ತನ್ನ ಮುಂದೆ ಛೀಮಾರಿಗೆ ಹಾಜರಾಗುವಂತೆ ಕರಂಜಿಯಾಗೆ ನಿರೂಪ ಕಳುಹಿಸಿತು. ಕರಂಜಿಯಾ ಹೆದರಲಿಲ್ಲ, ಬೆದರಲಿಲ್ಲ. ಪ್ರಧಾನಿಗಿಂತ ಹೆಚ್ಚು ಆಕರ್ಷಣೆ ಅಂದು ಕರಂಜಿಯಾಗೆ. ಅವರಿಗಾಗಿ ಮೇಲ್ಮನೆಯ ಪ್ರವೇಶದ್ವಾರದಲ್ಲೇ ನೂತನ ಕಟಕಟೆ (ಸಾಕ್ಷಿಪಂಜರ) ನಿರ್ಮಾಣವಾಯಿತು. ಇದೇ ಮೊತ್ತಮೊದಲ ಛೀಮಾರಿ ಪ್ರಸಂಗವಾದ ಕಾರಣ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾಂಸದಿಕರೆಲ್ಲ ಅಂದು ತಪ್ಪದೇ ಹಾಜರಾದರು. ಆ ದಿನ ಬಂದೇ ಬಿಟ್ಟಿತು.
ಅದೇ 29-8-1961. ಶಿಸ್ತಾಗಿ, ಟಾಕುಟೀಕಾಗಿ ಆರ್. ಕೆ. ಕರಂಜಿಯಾ ಸಂಸತ್ತ್ ಭವನ ಪ್ರವೇಶಿಸಿದರು. ಅವರನ್ನು ವಿಶೇಷ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಅವರಿಗೆ ಏನೂ ಬೇಜಾರವೇ ಇರಲಿಲ್ಲ. ನಗುತ್ತ ನಿಂತಿದ್ದರು. ಸ್ಪೀಕರ್ ಮಹಾಶಯರು ಅವರನ್ನುದ್ದೇಶಿಸಿ ಹೇಳಿದರು. ನೀವು ಈ ಸಂಸತ್ತಿನ ಓರ್ವ ಗೌರವಾನ್ವಿತ ಸದಸ್ಯರನ್ನು ಈ ಗೌರವಾನ್ವಿತ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣಕ್ಕಾಗಿ ಅತ್ಯಂತ ಅಗೌರವವಾಗಿ ಟೀಕಿಸಿ ಬರೆದಿದ್ದೀರಿ. ಅವಮಾನಕರವಾಗಿ ನಿಂದಿಸಿದ್ದೀರಿ. ಪತ್ರಿಕಾ ಸಂಪಾದಕರಾಗಿ ನಿಮ್ಮ ಮೇಲೆ ಉನ್ನತ ಜವಾಬ್ದಾರಿ ಇತ್ತು. ಗೌರವಾನ್ವಿತ ಸದಸ್ಯರ ಭಾಷಣ ಕುರಿತು ಬರೆಯುವಾಗ ಎಚ್ಚರ ಹಾಗೂ ಸಂಯಮ ವಹಿಸಬೇಕಾದದ್ದು ನಿಮ್ಮ ಜವಾಬ್ದಾರಿಯಾಗಿತ್ತು. ನೀವು ತಪ್ಪು ಮಾಡಿದ್ದೀರಿ ಮಾತ್ರವಲ್ಲ ನಿಮ್ಮ ಉತ್ತರದಿಂದಾಗಿ ಸಂಸತ್ತಿಗೆ ಇನ್ನಷ್ಟು ಅವಮಾನ ಮಾಡಿದ್ದೀರಿ. ಹಾಗಾಗಿ ಈ ಸದನದ ಹೆಸರಿನಲ್ಲಿ ನಾನು ನಿಮಗೆ, ನೀವು ಸಾರಾಸಗಟಾಗಿ ಈ ಸದನದ ಹಕ್ಕುಚ್ಯುತಿ ಹಾಗೂ ಅವಮಾನ ಮಾಡಿದಕ್ಕಾಗಿ, ಈ ಮೂಲಕ ಛೀಮಾರಿ ಹಾಕುತ್ತಿದ್ದೇನೆ. ಇನ್ನು ನೀವು ನಿರ್ಗಮಿಸಬಹುದು ಎಂದಾಗ ಇಡೀ ಸಂಸತ್ತಿನಲ್ಲಿ ಮೌನ ನೆಲೆಮಾಡಿತ್ತು. ಸದಸ್ಯರು ಒಂದು ಮಾತನ್ನೂ ಆಡದೇ ಮೌನ ಪ್ರೇಕ್ಷಕರಾಗಿ, ಶ್ರೋತೃಗಳಾಗಿ ಈ ಐತಿಹಾಸಿಕ ಘಟನೆಯ ಒಂದೊಂದು ಕ್ಷಣವನ್ನೂ ನೋಡುತ್ತಾ, ಕೇಳುತ್ತಾ ಕುಳಿತಿದ್ದರು. ನಿಮಿಷಗಳೊಳಗೆ ಈ ಐತಿಹಾಸಿಕ ಛೀಮಾರಿ ಪ್ರಸಂಗ ಮುಗಿದುಹೋಗಿತ್ತು. ಇನ್ನು ನೀವು ನಿರ್ಗಮಿಸಬಹುದು ಎಂದು ಸ್ಪೀಕರ್ ಆದೇಶಿಸಿದ ತಕ್ಷಣ, ಏನೂ ಆಗದಿದ್ದವರಂತೆ ಕರಂಜಿಯಾ ಹೊರನಡೆದರು. ಕುಂದಾಪ್ರ ಡಾಟ್ ಕಾಂ ಅಂಕಣ.
ಆದರೆ ಅಲ್ಲಿ ಆದದ್ದೇ ಬೇರೆ. ಭಾರೀ ಸಂಖ್ಯೆಯಲ್ಲಿದ್ದ ಅವರ ಬೆಂಬಲಿಗರ ಜಯಘೋಷ ಅವರನ್ನು ಕಾದಿತ್ತು. ಭಾರೀ ಹೂಮಾಲೆಗಳು ಅವರ ಕೊರಳನ್ನು ಅಲಂಕರಿಸಿದುವು. ಜನರ ಜಯ ಜಯಕಾರಗಳ ನಡುವೆ ಕರಂಜಿಯಾ ಅಲ್ಲಿಂದ ಮೆರವಣಿಗೆಯಲ್ಲಿ ನಿರ್ಗಮಿಸಿದ್ದರು. ಏನು ಶಿಕ್ಷೆ ಕೊಟ್ಟರೂ ಕೊಡಿ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಉತ್ತುಂಗ ಎಂಬ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ ಎಂದಿದ್ದರು ಕರಂಜಿಯಾ. ಆ ನಂತರ 1992-94ರಲ್ಲಿ ಅವರು ರಾಜ್ಯಸಭಾ ಸದಸ್ಯರೂ ಆಗಿದ್ದರು. ಕರಂಜಿಯಾ ಈಗಿಲ್ಲ. ಅವರು ಈ ಲೋಕದಿಂದ ನಿರ್ಗಮಿಸಿದ್ದರೂ ಅವರು ಎತ್ತಿದ ಮೂಲಭೂತ ಪ್ರಶ್ನೆಗಳು – ಸಂಸತ್ತಿನ ಹಕ್ಕುಬಾಧ್ಯತೆಗಳು ಮೇಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೋ ಎಂಬುದು ಇನ್ನೂ ಕೂಡ ಚರ್ಚಾಸ್ಪದವಾಗಿಯೇ ಉಳಿದಿದೆ. ಇಂದಿಗೂ ಕರಂಜಿಯಾ ಪ್ರಕರಣವನ್ನು ಸಾಂಸದಿಕರು ಹಿಡಿದೆಳೆದು ವಿವಾದಾಸ್ಪದವಾಗಿಯೇ ಇಟ್ಟಿದ್ದಾರೆಂದರೆ, ನ್ಯಾಯಾಲಯಗಳ ಸರಣಿ ತೀರ್ಪುಗಳಿದ್ದರೂ, ಜೀವಂತವಾಗಿ ಉಳಿದ ಈ ಪ್ರಶ್ನೆಯಲ್ಲಿ ಏನೋ ಖಂಡಿತ ಅಡಗಿದೆ ಎಂದು ಅನ್ನಿಸುವುದಿಲ್ಲವೇ?