Kundapra.com ಕುಂದಾಪ್ರ ಡಾಟ್ ಕಾಂ

ಈ ಸರಕಾರಕ್ಕೆ ನಿಜಕ್ಕೂ ಶೈಕ್ಷಣಿಕ ಪ್ರಜ್ಞೆ ಇದೆಯೆ?

ನರೇಂದ್ರ ಎಸ್ ಗಂಗೊಳ್ಳಿ. ಕುಂದಾಪ್ರ ಡಾಟ್ ಕಾಂ ಲೇಖನ.
ಒಬ್ಬ ವ್ಯಕ್ತಿಗೆ ಹೊಟ್ಟೆ ಹಸಿಯಲು ಆರಂಭವಾಗಿದೆ ಎಂದಿಟ್ಟುಕೊಳ್ಳಿ. ಹೋಟೆಲನ್ನು ಹುಡುಕಿ ದುಡ್ಡುಕೊಟ್ಟು ತಿನ್ನಬಲ್ಲ ತಾಕತ್ತೂ ಇದೆ. ಸುತ್ತಮುತ್ತಲಲ್ಲಿ ಹಲವಾರು ಹೋಟೆಲುಗಳು ಕಾಣಿಸುತ್ತಿವೆ. ಈ ನಡುವೆ ಸರ್ಕಾರಿ ಎಂದು ಬೋರ್ಡು ಹಾಕಿಕೊಂಡ ಹೋಟೆಲ್ಲೊಂದು ಬನ್ನಿ ನಮ್ಮ ಹೋಟೆಲ್ಲಿಗೆ ಬನ್ನಿ. ತಿಂಡಿ ಇನ್ನೂ ರೆಡಿಯಾಗಿಲ್ಲ. ಆದರೆ ನೀವು ಬಂದ ಮೇಲೆ ನೀವು ಆರ್ಡರ್ ಕೊಟ್ಟ ಮೇಲೆ ಅದನ್ನು ತಯಾರಿಸಲು ಬೇಕಾಗುವ ಸಮಾಗ್ರಿ ದಿನಸಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ನಿಮಗೆ ರುಚಿಕರವಾದ ತಿಂಡಿಯನ್ನು ಬಡಿಸುತ್ತೇವೆ ಎಂದು ಪ್ರಲಾಪಿಸುತ್ತಿದ್ದರೆ ಯಾವುದಾದರೂ ಗ್ರಾಹಕ ಆ ಹೋಟೆಲನ್ನು ನಂಬಿಕೊಂಡು ಬರುತ್ತಾನೆಯೆ? ಖಂಡಿತಾ ಇಲ್ಲ ಎನ್ನುವುದು ಈ ಜಗತ್ತಿನ ಅಪ್ಪಟ ನಿರಕ್ಷರಕುಕ್ಷಿಗೂ ಗೊತ್ತು. ಯಾಕೆಂದರೆ ಇದು ಕಾಮನ್ ಸೆನ್ಸ್. ಆದರೆ ಇಷ್ಟೊಂದು ಚಿಕ್ಕ ಕಾಮನ್ ಸೆನ್ಸ್ ಕೂಡ ನಮ್ಮ ಸರಕಾರದ ಶೈಕ್ಷಣಿಕ ವರ್ಗದ ಆಡಳಿತಾಧಿಕಾರಿಗಳಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಸಚಿವರುಗಳಲ್ಲಿ ಇಲ್ಲದೇ ಹೋಗಿರುವುದು ನಿಜಕ್ಕೂ ದೊಡ್ಡ ವಿಪರ‍್ಯಾಸ.

ನೀವೇ ಗಮನಿಸಿ ನೋಡಿ. ಶಿಕ್ಷಣ ಸಂಪನ್ಮೂಲದ ಸಮರ್ಪಕ ಬಳಕೆ ಮತ್ತು ಮರುನಿಯೋಜನೆ ಕ್ರಮಗಳ ಹೆಸರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಆದೇಶದಂತೆ ಈಗ ಸದ್ಯಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಇರುವ ಶಿಕ್ಷಕರ ಕೊರತೆ ನಿಭಾಯಿಸಲು ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅವರನ್ನು ಕೌನ್ಸೆಲಿಂಗ್ ಮೂಲಕ ಅಗತ್ಯ ಇರುವ ಶಾಲೆಗಳಿಗೆ ಮರುನಿಯೋಜನೆ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಅದು ಅದಿನ್ನೆಂತಹ ಅವೈಜ್ಞಾನಿಕ ಪ್ರಕ್ರಿಯೆ ಎಂದರೆ ಅಭಿವೃದ್ಧಿಯ ಹೆಸರಿನಲ್ಲಿ ಮನೆ ಮಠಗಳನ್ನು ಬೀದಿಗೆ ತಂದರು ಎಂಬಂತಿದೆ. ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ತುಂಬಬೇಕೆನ್ನುವ ವಿಚಾರವೇನೋ ಸರಿ ಆದರೆ ಅದಕ್ಕೆ ಇವರು ಆಯ್ದುಕೊಂಡ ಮಾರ್ಗ ಇದೆಯಲ್ಲಾ ಅದು ಮಾತ್ರ ಸಮಂಜಸವಾದುದಲ್ಲ.

ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲು ಇರುವ ಆಧಾರ ಮಕ್ಕಳ ಸಂಖ್ಯೆ ಅಂತೆ. ಅದರ ಪ್ರಕಾರ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಇರಬೇಕು. ತರಗತಿಗಳು ಎಷ್ಟಿವೆ ಎನ್ನುವುದು ಇವರಿಗೆ ಮುಖ್ಯ ಅಲ್ಲ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಹತ್ತು ಮಕ್ಕಳಿಗೆ ಒಬ್ಬರು ಶಿಕ್ಷಕರು. ೧೧ ರಿಂದ ೬೦ ಮಕ್ಕಳಿಗೆ ಇಬ್ಬರು ಮತ್ತು ೬೧ ರಿಂದ ೯೦ ಕ್ಕೆ ಮೂವರು ಮಾತ್ರ ಇರುವಂತೆ ಹಾಗೆಯೇ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಅಷ್ಟೇ. ಒಂದರಿಂದ ಐದು ಅಥವಾ ಏಳು ತರಗತಿಗಳೇ ಇರಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕ ಅಷ್ಟೂ ಜವಾಬ್ದಾರಿಯನ್ನೂ ಹೊರಬೇಕಂತೆ. ಸುಮ್ಮನೆ ಒಮ್ಮೆ ಕಲ್ಪಿಸಿಕೊಳ್ಳಿ. ಒಬ್ಬನೇ ಶಿಕ್ಷಕ ವಿವಿಧ ತರಗತಿಗಳಿಗೆ ಅನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಯಲ್ಲಾದರೆ ೨೨ ವಿಷಯ ಅದೇ ಹಿರಿಯ ಪ್ರಾಥಮಿಕ ಶಾಲೆಯಲ್ಲಾದರೆ ಬರೋಬ್ಬರಿ ಮೂವತ್ತ ನಾಲ್ಕು ವಿಷಯಗಳನ್ನು ಮಕ್ಕಳಿಗೆ ಪಾಠ ಮಾಡು ಎಂದರೆ ಹೇಗಿರುತ್ತೆ? ಜೊತೆಗೆ ನಲಿಕಲಿ, ಬಿಸಿಊಟ, ಶೌಚಾಲಯ ಸ್ವಚ್ಛತೆಯೂ ಸೇರಿದಂತೆ ಐವತ್ತಕ್ಕೂ ಅತ್ಯಧಿಕ ದಾಖಲೆಗಳನ್ನು ನಿರ್ವಹಿಸುತ್ತಾ ಸರ್ಕಾರಿ ಶಾಲೆಗಳಲ್ಲಿ ಕಾರ‍್ಯ ನಿರ್ವಹಿಸುವುದೆಂದರೆ ಅದೇನು ಶಾಲೆಯೋ? ಕಾರ್ಮಿಕರ ಗಿರಣಿಯೋ? ಸೆರೆಮನೆಯೊ?

ಹೋಗಲಿ ಆರವತ್ತು ಜನ ಮಕ್ಕಳಿಗೆ ಬರೀ ಇಬ್ಬರು ಶಿಕ್ಷಕರು ಸೇರಿಕೊಂಡು ಅಷ್ಟೊಂದು ತರಗತಿಗಳಿಗೆ ಪಾಠವನ್ನು ಮಾಡುವುದಾದರೂ ಹೇಗೆ? ಗುಣಮಟ್ಟದ ಶಿಕ್ಷಣ ಎನ್ನುವುದಕ್ಕೆ ಅದಾವ ರೀತಿಯಲ್ಲಿ ನ್ಯಾಯ ಸಲ್ಲಿಸಲು ಸಾಧ್ಯ ಹೇಳಿ? ಮಕ್ಕಳಲ್ಲಿ ವಿವಿಧ ವಿಚಾರಗಳ ಬಗೆಗೆ ಆಸಕ್ತಿ ಬೆಳೆಯುವುದಾದರೂ ಹೇಗೆ? ಪ್ರತೀ ತರಗತಿಗಳಿಗೂ ಅದದೇ ಶಿಕ್ಷಕರ ಮುಖವನ್ನು ಬೆಳಗಿನಿಂದ ಸಂಜೆ ತನಕ ಕುಳಿತುಕೊಂಡು ನೋಡುವುದಕ್ಕೆ ಕೇಳುವುದಕ್ಕೆ ಮಕ್ಕಳ ಮನೋ ಸಾಮರ್ಥ್ಯ ಹೇಗಿರಬೇಕು ಎನ್ನುವುದರ ವಿಶ್ಲೇಷಣೆಯನ್ನು ನಡೆಸಿದ್ದೀರಾ? ನೀವು ನೀಡುತ್ತಿರುವುದು ಶಿಕ್ಷಣವೋ ಅಥವಾ ಶಿಕ್ಷಣದ ಭಿಕ್ಷೆಯೋ? ಒಬ್ಬ ಅಥವಾ ಇಬ್ಬರು ಶಿಕ್ಷಕರು ಸೇರಿಕೊಂಡು ಪೂರಾ ತರಗತಿಗಳಿಗೂ ನಾವೇ ಟೀಚರ್ರು ಬನ್ನಿ ಅಂತ ಅದ್ಯಾವ ಮುಖವಿಟ್ಟುಕೊಂಡು ಜನರ ಬಳಿ ಹೋಗಿ ನಿಮ್ಮ ಮಕ್ಕಳನ್ನು ನಮ್ಮಲ್ಲಿ ಸೇರಿಸಿ ಎಂದು ಕೇಳುವುದು? ಜನರಿಗಾದರೂ ಇಂತಹ ಶಾಲೆಗಳ ಬಗೆಗೆ ಅದು ಹೇಗೆ ವಿಶ್ವಾಸ ಹುಟ್ಟಲು ಸಾಧ್ಯ ನೀವೆ ಹೇಳಿ?

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇರಬೇಕೋ ಅಥವಾ ತರಗತಿಗೆ ಅನುಸಾರವಾಗಿ ಕನಿಷ್ಠ ಒಬ್ಬರು ಶಿಕ್ಷಕರು ಇರಬೇಕೋ ಎನ್ನುವುದನ್ನು ಹೇಳಲು ಯಾವ ಬ್ರಹಸ್ಪತಿಯೂ ಬರಬೇಕಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೊದಲೇ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ಕೂಗು ದಿನಂಪ್ರತಿ ಎನ್ನುವಂತೆ ಕೇಳಿಬರುತ್ತಿದೆ. ವಸ್ತುಸ್ಥಿತಿ ಅಂತಿರುವಾಗ ಇರುವ ವ್ಯವಸ್ಥೆಗಳನ್ನು ಸುಧಾರಿಸುವುದನ್ನು ಬಿಟ್ಟು ಮರುನಿಯೋಜನೆಯ ಹೆಸರಿನಲ್ಲಿ ಒಂದು ಕಡೆ ಬೆಣ್ಣೆ ಬಳಿದಂತೆ ನಾಟಕ ಮಾಡಿ ಇನ್ನೊಂದು ಕಡೆಯಿಂದ ವ್ಯವಸ್ಥಿತವಾಗಿ ಸರ್ಕಾರಿ ಶಾಲೆಗಳನ್ನು ನಿರ್ನಾಮ ಮಾಡುತ್ತಾ ಬರಲು ಪ್ರತ್ಯಕ್ಷ ಪ್ರೇರೇಪಣೆ ನೀಡುತ್ತಿರುವ ಇಂತಹ ಮರುನಿಯೋಜನೆಯಂತಹ ಸರ್ಕಾರದ ನಿರ್ದೇಶನಗಳು ನಿಜಕ್ಕೂ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿರುವುದಕ್ಕೆ ಬಲವಾದ ಸಾಕ್ಷಿ.

ಈಗ ಇರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಿ ಒಂದು ಅದ್ಭುತವಾದ ಶೈಕ್ಷಣಿಕ ವಾತವಾರಣವನ್ನು ಕಟ್ಟಿಕೊಟ್ಟು ಜನಸಮಾನ್ಯರಲ್ಲಿ ಶಾಲೆಯ ಸೌಲಭ್ಯಗಳ ಬಗೆಗೆ ಅಲ್ಲಿನ ಭವಿಷ್ಯದ ಅಭಿವೃದ್ಧಿ ಪೂರಕವಾದ ವಾತವರಣದ ಬಗೆಗೆ ನಂಬಿಕೆಯನ್ನು ಹುಟ್ಟಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಅವರನ್ನು ಪ್ರೇರೇಪಿಸುವಂತೆ ಮಾಡಬೇಕಾಗಿದ್ದ ಸರ್ಕಾರ ಮರುನಿಯೋಜನೆಯ ಹೆಸರಿನಲ್ಲಿ ಇರುವ ಸೌಲಭ್ಯಗಳನ್ನು ಕಿತ್ತುಕೊಂಡು ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಅಧಃಪತನಕ್ಕೆ ತಳ್ಳುತ್ತಿರುವುದು ಸತ್ಯಸ್ಯ ಸತ್ಯ. ತೀರಾ ಗ್ರಾಮಾಂತರ ಪ್ರದೇಶಗಳ ಮಾತನ್ನು ಪಕ್ಕಕ್ಕಿಟ್ಟು ನೋಡಿದರು ಕನಿಷ್ಠ ಭವಿಷ್ಯದ ವಿಕಾಸದ ಭರವಸೆ ಉಳ್ಳ ಹಲವಾರು ಶಾಲೆಗಳಲ್ಲಾದರೂ ತರಗತಿಗೆ ಒಬ್ಬ ಶಿಕ್ಷಕರನ್ನು ನೀಡದೆ ಇರುವ ಇಲಾಖೆಯ ಆದೇಶ ಈಗ ಇರುವಂತಹ ಸರ್ಕಾರಿ ಶಾಲೆಗಳ ಮರಣ ಶಾಸನವನ್ನು ಬರೆಯುತ್ತಿರುವುದು ಸತ್ಯ.

ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಸಮರ್ಪಕವಾಗಿ ನೀಡುವ ಹೊಣೆ ಎಲ್ಲರದ್ದೂ ಆಗಿದೆ. ಶಿಕ್ಷಣ ಎನ್ನುವುದು ಅನುತ್ಪಾದಕ ಖಾತೆ ಅಥವಾ ಶಿಕ್ಷಕರಿಗೆ ಸಂಬಳ ನೀಡುವುದು ಸುಮ್ಮನೆ ಹೊರೆ ಅಷ್ಟೆ ಎಂಬೆಲ್ಲಾ ನೀಚ ಮನಸ್ಥಿತಿಗಳಿಂದ ನಮ್ಮ ಆಡಳಿತ ವರ್ಗ ಮತ್ತ ಶಿಕ್ಷಣ ಇಲಾಖಾಧಿಕಾರಿಗಳು ಮೊದ

ನರೇಂದ್ರ ಎಸ್. ಗಂಗೊಳ್ಳಿ

ಲು ಹೊರಬರಬೇಕಿದೆ. ಶಿಕ್ಷಕರು ಬಯಸುತ್ತಿರುವ ವರ್ಗಾವಣೆಗಳನ್ನು ನಿಯಾಮವಳಿ ತಿದ್ದುಪಡಿಯೆನ್ನುವ ಕುಂಟುನೆಪವೊಡ್ಡಿ ತಡೆಹಿಡಿದಿರುವುದು, ಖಾಲಿ ಇರುವ ಶಿಕ್ಷಕರ ಸ್ಥಾನಗಳನ್ನು ತುಂಬಲು ಪ್ರತೀ ಬಾರಿಯೂ ತಾತ್ಕಾಲಿಕ ನಿವಾರಣೆಯ ಮಾರ್ಗೋಪಾಯಗಳನ್ನು ಅನುಸರಿಸುವುದು, ಬಜೆಟ್ಟಿನಲ್ಲಿ ಕೋಟಿಗಟ್ಟಲೆ ಹಣ ತೆಗದಿರಿಸಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಸಡ್ಡೆ ತೋರುತ್ತಿರುವುದು ಈ ಎಲ್ಲವೂ ಕೂಡ ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸರಕಾರದ ನಿರಾಸಕ್ತಿಯನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಲೇ ಇವೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ನಮ್ಮಲ್ಲಿ ಸರ್ಕಾರಿ ಶಾಲೆಗಳಿದ್ದವು ಎಂದು ಪುಸ್ತಕಗಳಲ್ಲಿ ಮಾತ್ರ ಓದಬೇಕಾದ ದಿನ ದೂರವಿಲ್ಲ. ಬರಿಯ ಭಾಗ್ಯಗಳನ್ನು ಘೋಷಿಸುವುದರಿಂದ ಸರ್ಕಾರಿ ಶಾಲೆಗಳು ಉಳಿದುಕೊಳ್ಳಲಾರವು. ಅದರ ಉಳಿವಿಗೆ ಬೇಕಾಗಿರುವುದು ಅಪ್ಪಟ ಧೀಶಕ್ತಿ. ನೈತಿಕತೆ ಕಳೆದುಕೊಂಡಿರುವ ಸರ್ಕಾರದಿಂದ ಅದನ್ನು ನಿರೀಕ್ಷಿಸುವುದು ತಪ್ಪಾದೀತು. ಜನಶಕ್ತಿಯೆದುರು ಯಾವುದೂ ಇಲ್ಲ. ಪ್ರತೀ ಊರಿನ ಜನ ಇಂತಹ ಶಿಕ್ಷಕರ ಮರುನಿಯೋಜನೆಯಂತಹ ಅವೈಜ್ಞಾನಿಕ ಕ್ರಮಗಳ ವಿರುದ್ಧ ಒಗ್ಗಟ್ಟಾಗಿ ನಿಂತು ತಮ್ಮೂರ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಉಳಿಸಿಕೊಳ್ಳುವಲ್ಲಿ ಹೋರಾಡಬೇಕಾದ ತುರ್ತು ಪರಿಸ್ಥಿತಿ ಈಗಿನದು/ಕುಂದಾಪ್ರ ಡಾಟ್ ಕಾಂ ಲೇಖನ/

Exit mobile version