Kundapra.com ಕುಂದಾಪ್ರ ಡಾಟ್ ಕಾಂ

ವಿಜಯಲಕ್ಷ್ಮಿ ಶಿಬರೂರು ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಬದುಕಿಗೊಂದು ಸಾರ್ಥಕತೆ ದೊರೆಯಬೇಕಿದ್ದರೇ ನಾವು ಸಮಾಜದ ಋಣ ತೀರಿಸಬೇಕಿದೆ. ಒಳ್ಳೆಯ ಚಿಂತನೆಗಳನ್ನು ಬಿತ್ತಿದರೆ ಅದು ಮುಂದೆ ದೊಡ್ಡ ಕೊಡುಗೆಯಾಗುವುದು. ಸಂವಿಧಾನದಲ್ಲಿ ನೈಜ ಸ್ವತಂತ್ರ್ಯದ ಸತ್ಯಗಳು ಅಡಕವಾಗಿದ್ದು, ಆ ಬಗ್ಗೆ ನಾವು ಇನ್ನಷ್ಟು ಅಧ್ಯಯನ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ್ ಹೇಳಿದರು.

ಅವರು ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಡ್ಡರ್ಸೆ ದೃಷ್ಠಿಕೋನದಲ್ಲಿ ಪತ್ರಿಕೋದ್ಯಮ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಬಳಿಕ ಮಾತನಾಡಿದರು.

ರಾಜಕಾರಣಿಗಳು ಜನರ ಸೇವಕರು. ಅವರಿಂದ ನಾವು ಕೆಲಸ ಮಾಡಿಸಿಕೊಳ್ಳಬೇಕೇ ಹೊರತು ನಾವು ಅವರ ಆಳುಗಳಾಗಬಾರದು. ಕೆಲಸವಾಗದಿದ್ದರೇ ನಾವು ಅವರ ವಿರುದ್ಧ ನಿಲ್ಲುವ, ಪ್ರತಿಭಟಿಸುವ ಧೈರ್ಯ ಹೊಂದಿರಬೇಕು. ರೈತರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ಕಾರ್ಪರೇಟ್ ಸೆಕ್ಟರ್‌ಗೆ ಬದಲಾಗಿ ಸಹಕಾರಿ ತತ್ವ ದೇಶದಲ್ಲಿ ಅನಿಷ್ಠಾನಗೊಂಡರೇ ಮಾನವೀಯ ಸಾಧನವೊಂದರ ಉದಯವಾಗಿ ದೇಶ ಸರಿದಾರಿಯಲ್ಲಿ ನಡೆಯಲು ಸಾಧ್ಯವಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ ಸಮಾಜದಲ್ಲಿ ನಡೆಯುವ ಅನಾಚಾರಗಳ ವಿರುದ್ಧ ಪ್ರತಿಭಟಿಸುವ ಕಿಚ್ಚು ಯಾರಲ್ಲೂ ಇಲ್ಲ. ನಾವು ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಿದ್ದೇವಾ ಎನ್ನುವ ಭಯಹುಟ್ಟುತ್ತಿದೆ. ಯಾರೋ ಬಂದು ನಮ್ಮ ಸಮಸ್ಯೆಯನ್ನು ಸರಿಮಾಡಲಿ ಎಂದು ಕಾಯುವುದು ಸಮಾಜದ ದುರಂತ. ಸಮಾಜದಲ್ಲಿ ಅನಾಚಾರ, ಭ್ರಷ್ಟಾಚಾರಗಳ ಬಗ್ಗೆ ಜೀವದ ಹಂಗು ತೊರೆದು ವರದಿ ಮಾಡಿದರೂ ಫಾಲೋಅಪ್ ಮಾಡುತ್ತಿಲ್ಲ ಎಂದು ಮಾಧ್ಯಮದವರನ್ನೇ ಕೇಳುತ್ತಾರೆಯೇ ಹೊರತೂ, ಸಮಾಜವನ್ನು ಸ್ವಸ್ಥಗೊಳಿಸುವಲ್ಲಿ ನಮ್ಮದೂ ಬದ್ಧತೆ ಇದೆ ಎಂಬುದನ್ನೇ ಮರೆತು ಬಿಡುತ್ತಾರೆ. ಸಮಾಜದಲ್ಲಿ ಅಂಜಿಕೆಯೇ ಜಾಸ್ತಿಯಾದರೇ ಅನ್ಯಾಯದ ವಿರುದ್ಧ ಪ್ರತಿಭಟಿಸುವವರು ಯಾರು ಎಂದವರು. ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಸ್ಥಂಬ ಎಂದು ಹೇಳಲಾದರೂ ಕೂಡ ಪತ್ರಕರ್ತರಿಗೆ ಈವರೆಗೂ ಯಾವುದೇ ರಕ್ಷಣೆಯಿಲ್ಲ. ಪತ್ರಿಕೋದ್ಯಮ ಪ್ರವೇಶಿಸುವವರು, ಪತ್ರಕೋದ್ಯಮದಲ್ಲಿರುವವರೂ ಸಾಮಾನ್ಯ ಪ್ರಜೆಗಳೇ ಆಗಿದ್ದಾರೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ ಪ್ರಾಮಾಣಿಕ ಸೇವೆ ಮಾಡಿದರೇ ಸಮಾಜದ ಸುಸ್ಥಿತಿಯನ್ನು ಕಾಯ್ದುಕೊಳ್ಳಲು ಸಾಧ್ಯ ಎಂದ ಅವರು ಪತ್ರಕರ್ತರು ದಿನವೂ ಅಧ್ಯಯನಶೀಲರಾಗುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಹಿರಿಯ ಪತ್ರಕರ್ತ ಈಶ್ವರ ದೈತೋಟ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಗೀತಾನಂಧ ಪೌಂಡೇಶನ್ ಸಂಸ್ಥಾಪಕ ಆನಂದ ಸಿ. ಕುಂದರ್, ದುಬೈ ಫಾರ್ಚುನ್ ಗ್ರೂಫ್‌ನ ವಕ್ವಾಡಿ ಪ್ರವೀಣಕುಮಾರ್ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಮೊದಲಾವರು ಉಪಸ್ಥಿತರಿದ್ದರು.

ಪತ್ರಕರ್ತ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ನಿರೂಪಿಸಿದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version