Kundapra.com ಕುಂದಾಪ್ರ ಡಾಟ್ ಕಾಂ

ರಸ್ತೆಯಲ್ಲಿ ಸಿಕ್ಕ ಹಣವನ್ನು ವಾರಿಸುದಾರರಿಗೆ ಮರಳಿಸಿ ಮಾನವೀಯತೆ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ಮೀನುಗಾರ ಮಹಿಳೆ ಹಾಗೂ ದಿನಸಿ ಅಂಗಡಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಮತ್ತು ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಶೆಣೈ ಅವರಿಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ದೊರೆತ 7 ಸಾವಿರ ರೂ.ಗಳನ್ನು ವಾರೀಸುದಾರರಾದ ಬಿಜೂರು ನಿವಾಸಿ ತಿಮ್ಮಪ್ಪ ಎಂಬುವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ.

ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ‍್ಸ್ ಸಮೀಪ ಮುಖ್ಯರಸ್ತೆಯಲ್ಲಿ ಜುಲೈ 16 ರಂದು ಮಧ್ಯಾಹ್ನ ವ್ಯಕ್ತಿಯೋರ್ವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಸುಮಾರು 7 ಸಾವಿರ ರೂ. ಹಣ ರಸ್ತೆಯ ಮೇಲೆ ಬಿದ್ದಿದ್ದು, ಇದೇ ವೇಳೆ ಅಂಗಡಿಯಲ್ಲಿ ದಿನಸಿ ಸಾಮಾನು ಖರೀದಿಗೆ ಬಂದಿದ್ದ ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಎಂಬುವರು ರಸ್ತೆಯ ಮೇಲೆ ಬಿದ್ದಿದ್ದ ಹಣವನ್ನು ಒಟ್ಟು ಮಾಡಿ ಸ್ಥಳೀಯ ಅಂಗಡಿ ಮಾಲೀಕರಾದ ಜಿ.ವಿಠಲ ಶೆಣೈ ಅವರಿಗೆ ನೀಡಿದ್ದರು. ಇದೇ ಸಂದರ್ಭ ರಸ್ತೆಯ ಮೇಲೆ ಬಿದ್ದಿದ್ದ ಹಣವನ್ನು ಸಂಬಂಧಪಟ್ಟ ವಾರೀಸುದಾರರಿಗೆ ತಲುಪಿಸಲು ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಿ ಮಾಹಿತಿ ಹಾಕಲಾಗಿತ್ತು.

ವಾಟ್ಸಪ್‌ನಲ್ಲಿ ಮಾಹಿತಿ ನೋಡಿದ ಬಿಜೂರಿನ ನಿವಾಸಿ, ಬೈಂದೂರಿನ ಮೊಬೈಲ್ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿರುವ ತಿಮ್ಮಪ್ಪ ಎಂಬುವರು ಗಂಗೊಳ್ಳಿಗೆ ಬಂದು ತಮ್ಮ ಪರಿಚಯ ಹಾಗೂ ಹಣದ ಬಗ್ಗೆ ನಿಖರ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಅಂಗಡಿ ಬಳಿ ಇರುವ ಸಿಸಿಟಿವಿಯಲ್ಲಿ ಈ ಬಗ್ಗೆ ದೊರೆತ ಸ್ಪಷ್ಟ ಸಾಕ್ಷ್ಯಗಳಿಂದ ಹಣವನ್ನು ಸಂಬಂಧಪಟ್ಟವರಿಗೆ ವಾಪಾಸು ಮಾಡಲಾಗಿದೆ.

Exit mobile version