ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭೆ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಗೌಜು ಗದ್ದಲಗಳ ನಡುವೆ ಮೊಟಕುಗೊಂಡಿತು. ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬುಗಿಲೆದ್ದ ಭಿನ್ನಮತ ಇನ್ನೂ ಶಮನವಾಗದಿರುವುದು ಸಭೆಯ ಗೌಜಿಗೆ ಆಹಾರವಾಗಿದ್ದರೇ, ಸಭೆಯಲ್ಲಿ ಅಧ್ಯಕ್ಷರ ಬದಲು ಉಪಾಧ್ಯಕ್ಷರು ಉತ್ತರಿಸುತ್ತಿರುವುದು ವಿರೋಧ ಪಕ್ಷದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗತೊಡಗಿದೆ. ಸಭೆಯಲ್ಲಿ ಮಂಡಿಸಲಾದ 17 ಅಜೆಂಡಾಗಳು ಧ್ವನಿಮತದ ಅಂಗೀಕಾರ ಪಡೆದರೇ, ಗಲಾಟೆ ನಿಯಂತ್ರಣಕ್ಕೆ ಬಾರದೇ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಹೊರನಡೆದ ಪ್ರಸಂಗವೂ ನಡೆಯಿತು.
ವಿರೋಧ ಪಕ್ಷದ ಸದಸ್ಯರಾದ ಶ್ರೀಧರ ಶೇರುಗಾರ್, ಪ್ರಭಾಕರ ಕೋಡಿ, ಶಶಿಕಲಾ ಗಣೇಶ್ ಶೇರುಗಾರ್, ಸಂದೀಪ ಕೋಡಿ ಇತರರು ಎಲ್ಲಾ ಪ್ರಶ್ನೆಗಳಿಗೆ ಉಪಾಧ್ಯಕ್ಷರೇ ಉತ್ತರಿಸುತ್ತಿದ್ದಾರೆ. ಅಧ್ಯಕ್ಷರೇಕೆ ಮೌನವಹಿಸುತ್ತಾರೆ. ಅವರಿಗೆ ಮಾತನಾಡಲು ಬರುವುದಿಲ್ಲವೇ? ನಮಗೆ ಅವರೇ ಉತ್ತರಿಸಬೇಕು ಎಂದು ಪಟ್ಟ ಹಿಡಿದರು.
ಎಲ್ಲಾ ಪ್ರಶ್ನೆಗಳಿಗೂ ಅಧ್ಯಕ್ಷರೇ ಉತ್ತರಿಸಬೇಕು. ಉಪಾಧ್ಯಕ್ಷರು ಮಾತನಾಡುವಂತಿಲ್ಲ ಎಂಬ ನಿಯಮವಿದೆಯೇ. ನಾನೇನು ಮೂಕಿಯೂ ಅಲ್ಲಾ, ಕಿವುಡಿಯೂ ಅಲ್ಲಾ. ನನಗೂ ಮಾತನಾಡಲು ಬರುತ್ತದೆ.ಉತ್ತರಿಸಬೇಕಾದಕ್ಕೆ ಉತ್ತರಿಸಿದ್ದೇನೆ. ಕುಂದಾಪುರ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬನ್ನಿ ಚರ್ಚಿಸೋಣ. ಅದನ್ನು ಬಿಟ್ಟು ಅಧ್ಯಕ್ಷರೇ ಉತ್ತರಬೇಕು ಎನ್ನುವ ಪಟ್ಟು ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು ಧಿಕ್ಕಾರ ಕೂಗಿದರಲ್ಲದೇ ಮಂಡನೆಯಾದ ಯಾವ ಅಜೆಂಡಾಕ್ಕೆ ನಮ್ಮ ಸಮ್ಮತಿಯಿಲ್ಲ. ಸಭೆಯಲ್ಲಿ ಚರ್ಚೆ ನಡೆಸಬೇಕು. ಅಧ್ಯಕ್ಷರೇ ಉತ್ತರಿಸಬೇಕು. ಎಂದು ಒತ್ತಾಯಿಸಿದರು.
ಕುಂದಾಪುರ ಪುರಸಭೆ ಅಧ್ಯಕ್ಷ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ ಹಾಗೂ ಪ್ರಭಾರ ಮುಖ್ಯಾಧಿಕಾರಿ ಉರ‍್ಬಾನ್ ಡಿಸೋಜಾ ಇದ್ದರು. ಇದೇ ಸಂದರ್ಭದಲ್ಲಿ ಕುಂದಾಪುರ ಪುರಸಭೆ 19 ಅಂಗನವಾಡಿ ಕೇಂದ್ರದ 396 ಮಕ್ಕಳಿಗೆ ಸಾಂಕೇತಿಕವಾಗಿ ಸಮವಸ್ತ್ರ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ವಿತರಿಸಿದರು.