ಕುಂದಾಪುರ: ಇಂದು ದೇಶದಲ್ಲಿ ಮಕ್ಕಳ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಶೇ.8.2ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ನಾವು ನೋಡುತ್ತೇವೆ. ವರ್ಷಕ್ಕೆ ಸುಮಾರು ಮೂರೂವರೆ ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ ಹೇಳಿದರು.
ಅವರು ಕುಂದಾಪುರ ಪಿ.ವಿ.ಎಸ್.ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ತಾ.ಪಂ. ಕುಂದಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು
ಮಕ್ಕಳಿಗೆ ನಿರುಪಯುಕ್ತವಾದ ವಸ್ತುಗಳು ಒಳ್ಳೆಯದೆಂಬಂತೆ ಗೋಚರಿಸುತ್ತವೆ. ಅವರಲ್ಲಿ ಚರ್ಚಿಸುವ, ಬದುಕುವ, ಹೋರಾಟದ ಮನೋಭಾವವನ್ನು ಮೂಡಿಸುವುದರೊಂದಿಗೆ ಅವರ ಹಕ್ಕುಗಳ ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಶಿಕ್ಷಣವನ್ನು ಕೊಡುವ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಪರಿಸರ, ಕುಟುಂಬ ಹಾಗೂ ಶಾಲೆಗಳು ಮಾಡಬೇಕಾಗಿದೆ ಎಂದರು.
ಜಿ.ಪಂ.ಉಪಾಧ್ಯಕ್ಷ ಪ್ರಕಾಶ್ ಟಿ.ಮೆಂಡನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪುರಸಭೆಯ ಅಧ್ಯಕ್ಷ ಕಲಾವತಿ ಯು.ಎಸ್.ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ,, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನರಸಿಂಹ ಐತಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ರಾಜೇಂದ್ರ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದಾನಂದ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.