Kundapra.com ಕುಂದಾಪ್ರ ಡಾಟ್ ಕಾಂ

ಎ.10: ಅಮಾಸೆಬೈಲಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ

ಉಡುಪಿ : ಅಮಾಸೆಬೈಲು ಗ್ರಾ.ಪಂ, ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಉಡುಪಿ ಮತ್ತು ಕುಂದಾಪುರ, ಹಿಂದುಳಿದ ವರ್ಗ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಂದಾಪುರ, ಕರ್ಣಾಟಕ ಬ್ಯಾಂಕ್‌ ಮಂಗಳೂರು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಎ.10ರಂದು ಬೆಳಗ್ಗೆ 10.30ಕ್ಕೆ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ಜರಗಲಿದೆ ಎಂದು ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಸಚಿವ ವಿನಯ ಕುಮಾರ್‌ ಸೊರಕೆ, ಸಭಾ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಅನಂತಕೃಷ್ಣ ಉದ್ಘಾಟಿಸಲಿದ್ದಾರೆ. ಮೀನು ಮಾರುಕಟ್ಟೆ ಶಂಕುಸ್ಥಾಪನೆಯನ್ನು ಸಚಿವ ಅಭಯಚಂದ್ರ ಜೈನ್‌ ನೆರವೇರಿಸಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಿದ್ದಾರೆ.

ಕೃಷಿ ಮಾರುಕಟ್ಟೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌, ಜೈವಿಕ ಅನಿಲ ಘಟಕವನ್ನು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌.ಮಂಜುನಾಥ ಅವರು ಶಾಲಾ ಮಕ್ಕಳಿಗೆ ಕನ್ನಡಕ ವಿತರಣೆ ಮತ್ತು ಶೌಚಾಲಯ ಸಹಾಯಧನ ವಿತರಣೆ ಮಾಡಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ  ಮತ್ತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅವರು ಶುದ್ಧ ಕುಡಿಯುವ ನೀರಿನ ಘಟಕ, ಬಸ್‌ ನಿಲ್ದಾಣ ಉದ್ಘಾಟಿಸಲಿದ್ದಾರೆ. ಶಾಸಕ ಗೋಪಾಲ ಪೂಜಾರಿ ರಿಕ್ಷಾ, ಟ್ಯಾಕ್ಸಿ ನಿಲ್ದಾಣ ಉದ್ಘಾಟಿಸಲಿದ್ದು ನ್ಯಾ| ಸಂತೋಷ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ ಸದಾಶಿವ ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ದುಗ್ಗೇಗೌಡ, ಕರ್ಣಾಟಕ ಬ್ಯಾಂಕ್‌ ರೀಜನಲ್‌ ಮ್ಯಾನೇಜರ್‌ ಎಚ್‌. ಪಿ.ಆರ್‌.ಹಂದೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version