Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೇವಲ ಮಾತಿನಲ್ಲೇ ಕಾಲಹರಣ ಮಾಡಲಾಗುತ್ತಿದೆ. ಸದಸ್ಯರ ನಡುವಿನ ಕಚ್ಚಾಟದಿಂದ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ತಮ್ಮ ಕೆಲಸಕಾರ್ಯಗಳಿಗೆ ಜನರು ಪಂಚಾಯತ್‌ಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ೨೦೧೬-೧೭ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಪಂಚಾಯತ್ ಆಡಳಿತದ ಮತ್ತು ಕಾರ್ಯವೈಖರಿ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು.

ಗ್ರಾಮಸಭೆಗಳಲ್ಲಿ ಕೈಗೊಂಡ ನಿರ್ಣಯ ಯಾವುದೂ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮಸಭೆಯ ನಿರ್ಣಯಗಳಿಗೆ ಯಾವುದೇ ಬೆಲೆ ಇಲ್ಲ. ನಿರ್ಣಯಗಳು ಕೇವಲ ಪುಸ್ತಕದಲ್ಲಿ ಮಾತ್ರ. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಥಳೀಯಾಡಳಿತ ಸ್ಪಂದಿಸುತ್ತಿಲ್ಲ. ದಾರಿದೀಪ, ಸ್ವಚ್ಛತೆ, ಕುಡಿಯುವ ನೀರು ವಿಚಾರದಲ್ಲಿ ಸ್ಥಳೀಯಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ಸಕಾಲದಲ್ಲಿ ನೀಡಿದ ಅರ್ಜಿಗಳನ್ನು ಗ್ರಾಮ ಪಂಚಾಯತ್‌ನಲ್ಲಿ ಸ್ವೀಕರಿಸುತ್ತಿಲ್ಲ. ಜನರನ್ನು ಅನಗತ್ಯವಾಗಿ ಪಂಚಾಯತ್‌ಗೆ ಸುತ್ತಾಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗಂಗೊಳ್ಳಿಯಲ್ಲಿ ೧೦೮ ಅಂಬುಲೆನ್ಸ್ ಸೇವೆ ಇದ್ದರೂ ಅದರ ಪ್ರಯೋಜನ ಜನರಿಗೆ ದೊರೆಯುತ್ತಿಲ್ಲ. ಗಂಗೊಳ್ಳಿ ಬಿಟ್ಟು ಬೇರೆಡೆ ಅಂಬುಲೆನ್ಸ್ ನಿಲ್ಲುತ್ತಿದ್ದು, ಸರಕಾರದ ಪ್ರಚಾರ ವಾಹನ ಎಂಬಂತಾಗಿದೆ. ರಾತ್ರಿ ೮ ಗಂಟೆಯಿಂದ ಬೆಳಿಗ್ಗೆ ೮ ಗಂಟೆವರೆಗೆ ೧೦೮ ಸೇವೆ ಇಲ್ಲದಿದ್ದರೆ, ೧೦೮ ಅಂಬುಲೆನ್ಸ್ ಇದ್ದೂ ಏನು ಪ್ರಯೋಜನ ಎಂದು ೧೦೮ ಅಂಬುಲೆನ್ಸ್ ಸೇವೆ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿಗಳ ಕೊರತೆಯನ್ನು ಸರಿಪಡಿಸಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

ಗಂಗೊಳ್ಳಿಗೆ ಸರಕಾರಿ ಬಸ್ಸುಗಳಿಗೆ ಪರ್ಮಿಟ್ ಮಂಜೂರಾಗಿದ್ದು, ಇನ್ನಷ್ಟು ಸರಕಾರಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳಬೇಕು. ಖಾಸಗಿ ಬಸುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದ್ದು, ಮಕ್ಕಳನ್ನು ಅಗತ್ಯಕ್ಕಿಂತ ಹೆಚ್ಚು ತುಂಬಿಸಲಾಗುತ್ತಿದೆ. ಶಾಲಾ ಮಕ್ಕಳಿರುವ ಬಸ್ಸುಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದರು. ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ಹಂಪ್ಸ್ ಪುನರ್ ನಿರ್ಮಿಸಬೇಕು. ಬಂದರು ಬಸ್ ನಿಲ್ದಾಣದ ಸಮೀಪದಲ್ಲಿರುವ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಬಸ್ ಹಾಗೂ ಇನ್ನಿತರ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸ್ಥಳೀಯರಾದ ನವೀನ ದೊಡ್ಡಹಿತ್ಲು, ರಾಘವೇಂದ್ರ ಗಾಣಿಗ, ರವೀಂದ್ರ ಪಟೇಲ್, ಫಿಲೋಮಿನಾ ಫೆರ್ನಾಂಡಿಸ್, ಪ್ರಕಾಶ ಶೆಣೈ ಮೊದಲಾದವರು ಆಗ್ರಹಿಸಿದರು.

ಗಂಗೊಳ್ಳಿ ಮೀನು ಮಾರುಕಟ್ಟೆ ವಿಸ್ತರಣೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಸಮೀಪದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪಕ್ಕದ ಶಾಲೆಯೊಂದಿಗೆ ವಿಲೀನಗೊಳಿಸಿ ಶಾಲೆಯ ಜಾಗವನ್ನು ಮೀನು ಮಾರುಕಟ್ಟೆ ನಿರ್ಮಿಸಲು ನೀಡಬೇಕು ಎಂದು ಸ್ಥಳೀಯ ಗ್ರಾಪಂ ಸದಸ್ಯ ಯೂನಿಸ್ ಸಾಹೇಬ್ ಒತ್ತಾಯಿಸಿದರು. ಮ್ಯಾಂಗನೀಸ್ ರೋಡ್ ಪರಿಸರದಲ್ಲಿ ನೀರು ನಿಂತು ಕೃಷಿಗೆ ಸಮಸ್ಯೆಯಾಗುತ್ತಿದ್ದು, ಬಂದರು ಇಲಾಖೆಯಾಗಲಿ, ಸ್ಥಳೀಯಾಡಳಿತವಾಗಲಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಗಂಗೊಳ್ಳಿ ವಿದ್ಯುತ್ ಉಪಕೇಂದ್ರ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಗಂಗೊಳ್ಳಿ ಪೇಟೆ ಪ್ರದೇಶದಲ್ಲಿ ಲೋವೋಲ್ಟೆಜ್ ಸಮಸ್ಯೆ ಬಗೆಹರಿಸಲು ವಿದ್ಯುತ್ ಪರಿವರ್ತಕ ಅಳವಡಿಸಬೇಕಾಗಿದ್ದು, ಸೂಕ್ತ ಸ್ಥಳಾವಕಾಶ ನೀಡುವಂತೆ ಮೆಸ್ಕಾಂ ಜೆಇ ರಾಘವೇಂದ್ರ ಮನವಿ ಮಾಡಿದರು.

ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಕೆ.ಸೀತಾರಾಮ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿಯರ್ ರಾಜ್‌ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ತಾಪಂ ಸದಸ್ಯ ಸುರೇಂದ್ರ ಖಾರ್ವಿ ಮಾರ್ಗದರ್ಶನ ನೀಡಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಂಜುನಾಥ, ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಮೆಸ್ಕಾಂ ಶಾಖೆಯ ಜೆಇ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾವತಿ ಶೆಡ್ತಿ, ಮೀನುಗಾರಿಕಾ ಇಲಾಖೆಯ ಗೋಪಾಲಕೃಷ್ಣ ಇಲಾಖಾ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಬಿಆರ್‌ಪಿ ದೇವಕುಮಾರಿ, ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ ಗೊಲ್ಲ, ಬಂದರು ಇಲಾಖೆಯ ಅಂತೋನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Exit mobile version