ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅವೈಜ್ಞಾನಿಕವಾದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಿಂದ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ತೆಂಕೊಡಿಗೆ ಶಾಲೆಯಲ್ಲಿ ಗುರುತಿಸಿದ ಹೆಚ್ಚುವರಿ ಶಿಕ್ಷಕರನ್ನು ಈ ಮಧ್ಯಂತರ ಅವಧಿಯಲ್ಲಿ ವರ್ಗಾವಣೆ ಮಾಡಬಾರದೆಂದು ಆಗ್ರಹಿಸಿ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರಾ ಕುಗ್ರಾಮವಾದ ತೆಂಕೊಡಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು, ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ಶೆಟ್ಟಿ ಅವರು ೧೨ ವರ್ಷದಿಂದ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಕೂಡಾ ನೆಚ್ಚಿನಶಿಕ್ಷಕರಾಗಿರುವ ಇವರ ವರ್ಗಾವಣೆಯನ್ನು ತಡೆ ಹಿಡಿಯಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭವಾದರೂ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ಯಾವ ಅಧಿಕಾರಿಯೂ ಬಾರದ ಹಿನ್ನೆಲೆಯನ್ನು ಸೋಮವಾರ ಮತ್ತೆ ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮನವಿಯನ್ನು ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅವರಿಗೆ ಸಲ್ಲಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ ಶಾರ್ಕೆ, ಉಪಾಧ್ಯಕ್ಷರು, ಸದಸ್ಯರು, ಗ್ರಾ.ಪಂ.ಸದಸ್ಯರು, ಪೋಷಕರು, ಗ್ರಾಮಸ್ಥರು ಹಾಜರಿದ್ದರು.