Kundapra.com ಕುಂದಾಪ್ರ ಡಾಟ್ ಕಾಂ

ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿವೇತನ ವಿತರಣಾ ಸಮಾರಂಭ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಜೀವನದಲ್ಲಿ ಮಾಡಿದ ಉತ್ತಮ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾಭ್ಯಾಸಕ್ಕೆ ನೆರವು ನೀಡುವುದರಿಂದ ಅನೇಕ ಪ್ರತಿಭಾವಂತ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಎಲ್ಲಾ ರಂಗಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿದ್ದು, ಯುವಶಕ್ತಿಗಳಿಂದ ೨೦೨೦ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ ಕಾವೇರಿ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಗಂಗೊಳ್ಳಿಯ ಪಂಚಗಂಗಾವಳಿ ಬಳಗ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೨ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಬಸ್ರೂರು ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕಿ ಸುಮತಿ ಶ್ಯಾನುಭಾಗ್ ಮಾತನಾಡಿ ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಬುದ್ಧಿಗೆ ಮಾತ್ರ ನೀಡುವ ಶಿಕ್ಷಣವಾಗಿದೆ. ಇಂತಹ ಶಿಕ್ಷಣದಿಂದ ಮಕ್ಕಳ ಬೌದ್ಧಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಹೃದಯದ ಶಿಕ್ಷಣದ ಅವಶ್ಯಕತೆ ಇದೆ. ಮನುಷ್ಯನ ಹೃದಯ, ಮನಸ್ಸುಗಳನ್ನು ತಲುಪುವ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಮನೋಬಲ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಬೇರೆ ಪ್ರದೇಶಗಳಿಗೆ ತೆರಳಿದರೂ ತಮ್ಮ ಹುಟ್ಟೂರು ಹಾಗೂ ನಮಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದವರನ್ನು ಎಂದಿಗೂ ಮರೆಯಬಾರದು. ನಾವು ಬೆಳೆದು ಬಂದ ದಾರಿಯನ್ನು ಪುನ: ಆತ್ಮಾವಲೋಕನ ಮಾಡಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಸಹಕಾರ ನೀಡುವಂತಾಗಬೇಕು ಎಂದರು.

ಭಾರತೀಯ ಜೀವವಿಮಾ ನಿಗಮದ ಕುಂದಾಪುರದ ಆರ್ಥಿಕ ಸಲಹೆಗಾರ ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂಚಗಂಗಾವಳಿ ಸ್ವಾಸ್ಥ್ಯನಿಧಿ ಯೋಜನೆಯ ಗೌರವಾಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಪಂಚಗಂಗಾವಳಿ ಬಳಗದ ಅಧ್ಯಕ್ಷ ಸಂದೀಪ ಖಾರ್ವಿ ಉಪಸ್ಥಿತರಿದ್ದರು. ವಿದ್ಯಾನಿಧಿ ಯೋಜನೆಯ ಸಂಚಾಲಕ ಜಿ.ಪುರುಷೋತ್ತಮ ಆರ್ಕಾಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೇತನ್ ಖಾರ್ವಿ ಸಂದೇಶ ವಾಚಿಸಿದರು. ಗೌರವ ಕಾರ್ಯದರ್ಶಿ ಜಿ.ಎನ್.ಸತೀಶ ಖಾರ್ವಿ ವರದಿ ವಾಚಿಸಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

Exit mobile version