Kundapra.com ಕುಂದಾಪ್ರ ಡಾಟ್ ಕಾಂ

ನಮ್ಮದಲ್ಲದ ಲೋಕವನ್ನು ನಮ್ಮದಾಗಿಸುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಹೆಚ್. ಎಸ್. ರಾಘವೇಂದ್ರ ರಾವ್

ವೈ ಎಸ್. ಹರಗಿ ಅವರಿಗೆ ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮದಲ್ಲದ ಲೋಕವನ್ನು ನಮ್ಮದಾಗುವಂತೆ ಕಟ್ಟಿಕೊಡುವ ಸಾಮರ್ಥ್ಯ ಕಥೆ, ಕವನ ಮತ್ತು ಕಾದಂಬರಿಗಳಲ್ಲಿ ಅಡಗಿದೆ. ಸಾಹಿತ್ಯವನ್ನು ಸಂಗಾತಿಯನ್ನಾಗಿ ಮಾಡಿಕೊಂಡವರಿಗೆ ಅದರೊಳಗಿನ ಅಂತಃಶಕ್ತಿ ಅರಿವಾಗುತ್ತದೆ ಎಂದು ವಿಮರ್ಶಕ ಡಾ. ಹೆಚ್. ಎಸ್. ರಾಘವೇಂದ್ರ ರಾವ್ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಒಬ್ಬ ಒಳ್ಳೆಯ ಸಾಹಿತ್ಯ ಒದುಗನಿಗೆ ಪ್ರಪಂಚದ ತನ್ನದಲ್ಲದ ಜೀವನದ ಸಂವೇದನೆ ಮತ್ತು ಸಂಘರ್ಷಗಳನ್ನು ಏಕಕಾಲದಲ್ಲಿ ಮನಸಿಗೆ ನಾಟುವಂತೆ ಅದನ್ನು ಅನಿಭವಿಸುವಂತೆ ಮಾಡುವುದು ಕಾದಂಬರಿಗಳು. ಅವು ಸೃಷ್ಠಿಸುವ ಪಾತ್ರಗಳು ಹೇಗೆ ಇರಲಿ ಅವು ನಮ್ಮದಾಗುತ್ತಾ ನಮ್ಮನ್ನು ನಾವು ಅರ್ಥೈಸಿಕೊಳ್ಳಲು ನಮ್ಮೊಳಗಿನ ಮನಸನ್ನು ತೆರೆದಿಡುತ್ತಾ ಹೋಗುತ್ತದೆ. ಕಾದಂಬರಿಗಳಿಗೆ ಪಾತ್ರವನ್ನು ಕಟ್ಟಿಕೊಡುವ ಶಕ್ತಿ ಇದೆ. ಕೆಲವೊಮ್ಮೆ ವಾಸ್ತವವನ್ನು ಹೇಳಲು ಅವಾಸ್ತವಿಕತೆಯನ್ನು ಬಳಸುತ್ತವೆ ಎಂದು ಹೇಳಿದರು.

ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ‘ಉರಿವ ಜಲ’ ಕಾದಂಬರಿ ಕುರಿತು ಮಾತನಾಡಿ ಶಾಂತವಾಗಿರುವ ಸಮಾಜದ ಮನಸ್ಸುಗಳನ್ನು ಅವರೊಳಗಿನ ಜ್ವಾಲಾಮುಖಿಯನ್ನು ತಿಳಿಸಿಕೊಡುತ್ತದೆ. ಅಲ್ಲಿ ಬರುವ ಪಾತ್ರಗಳು ದೇವದಾಸಿಯರುರ, ಸ್ತ್ರೀಯರ, ದಲಿತರ ಹಾಗೆ ಸಾಮಾಜಿಕ ನೆಲೆಗಳ ಹತಾಶೆ ಮತ್ತು ಅವರ ಒಳಮನಸ್ಸಿನ ಉರಿಯನ್ನು ಹೇಳುತ್ತದೆ. ಜೊತೆಗೆ ಆಯಸ್ಕಾಂತದಂತೆ ಸೆಳೆಯುವ ಮುದುಕನ ಪಾತ್ರದ ಮೂಲಕ ಆಶಾವಾದವನ್ನು ತುಂಬುತ್ತದೆ. ಜೊತೆಯಲ್ಲಿ ಕಾದಂಬರಿ ಇತಿಹಾಸದ ಹಲವು ಮುಖಗಳನ್ನು ಪರಿಚಯಿಸುತ್ತಾ ಹೋಗುತ್ತದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯನ್ನು ‘ಉರಿವ ಜಲ’ ಕಾದಂಬರಿಯ ಕರ್ತೃ ವೈ.ಎಸ್. ಹರಗಿಯವರಿಗೆ ಪ್ರದಾನ ಮಾಡಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಮಾತನಾಡಿ ಒಳ್ಳೆಯ ಕಾದಂಬರಿಗೆ ಪ್ರಶಸ್ತಿ ದೊರೆಕಿದೆ. ಕಾದಂಬರಿ ಓದುಗನನ್ನು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಸಾಮಾಜಿಕ ನೆಲೆಗಳ ತುಡಿತ, ಗ್ರಾಮೀಣ ಪರಿಸರ ಸೇರಿದಂತೆ ಸಮಾಜದ ಸಂಘರ್ಷ ಮತ್ತು ಸಂವೇದನೆಗಳ ಚಿತ್ರಣ ತಿಳಿಯಬೇಕಾದರೆ ಈ ಕಾದಂಬರಿ ಓದಲೇ ಬೇಕಾಗುತ್ತದೆ. ಇಂತಹ ಕಾದಂಬರಿಗಳಿಂದ ಯುವಜನತೆಯ ಸಾಹಿತ್ಯದ ಬಗೆಗಿನ ಕಾಳಜಿ ಹೆಚ್ಚಲಿ ಮತ್ತು ಸಾಹಿತ್ಯ ರಚನೆಗಳಿಗೆ ಪ್ರಚೋದನೆ ಸಿಗಲಿ ಎಂದು ಹೇಳಿದರು.

ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ವೈ ಎಸ್. ಹರಗಿಯವರು ಮಾತನಾಡಿ ಕೃತಿಯಲ್ಲಿ ಬರುವ ಪಾತ್ರಗಳು ಪರಸ್ಪರ ನಮ್ಮ ನಮ್ಮಲ್ಲಿಯೇ ನಡೆಯುವ ಮತ್ತು ಸಾಮಾಜಿಕ ವವಸ್ಥೆಯ ನಡುವಿನ ಸಂಘರ್ಶಗಳನ್ನು ಹೇಳುತ್ತದೆ . ಅಲ್ಲದೇ ಪ್ರಶಸ್ತಿ ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸದಸ್ಯರಾದ ಕೋಣಿ ಶಿವರಾಮ ಕಾರಂತ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಂದಿಸಿದರು. ಉಪಾನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version