Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ: ಜಿಲ್ಲಾ ಮಟ್ಟದ ಈಜು ಸ್ಪರ್ಧೆಗೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಈಜು ಎನ್ನುವುದು ಯಾವುದೇ ದುಶ್ಪರಿಣಾಮ ಇಲ್ಲದ, ಎಲ್ಲರೂ ಮಾಡಬಹುದಾದ ಒಂದು ವ್ಯಾಯಾಮ. ದಿನನಿತ್ಯ ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುದರೊಂದಿಗೆ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಈಜು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಸ್ವೀಮ್ಮಿಂಗ್ ಕ್ಲಬ್ ಆಯೋಜಿಸಿದ ಈ ಈಜುಸ್ಪರ್ಧೆ ಈಜುಪಡುಗಳಿಗೆ ಪ್ರೋತ್ಸಾಹ ನೀಡುವಂತಹುದು ಎಂದು ಯುವಜನ ಸೇವೆ, ಕ್ರೀಡೆ, ಮೀನುಗಾರಿಕಾ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಪುಷ್ಕರಣಿಯಲ್ಲಿ ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಮಹಾಲಸಾ ಎಂಟರ್‌ಪ್ರೈಸಸ್ ಮತ್ತು ಏಕದಂತ ಎಂಟರ್‌ಪ್ರೈಸಸ್ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲಿರುವ ಇಂದಿನ ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಮರೆಯಾಗುತ್ತಿದೆ. ಆದ್ದರಿಂದ ಹೆತ್ತವರು ಮಕ್ಕಳ ಅಭಿರುಚಿಯನ್ನು ಗಮನಿಸಿ ಅವರ ಭವಿಷ್ಯಕ್ಕೆ ಸಹಕಾರ ನೀಡಬೇಕು ಎಂದರು.

ಇದೇ ಸಂದರ್ಭ ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್‌ವತಿಯಿಂದ ಕಾರ್ಕಡದಲ್ಲಿ ಹೊಸ ಕಾರ್ಕಡ ಶಾಲೆಯವರು ನೀಡಿದ ಒಂದು ಎಕರೆ ಸ್ಥಳದಲ್ಲಿ ಈಜುಕೊಳ ನಿರ್ಮಿಸಲು ಅನುದಾನ ಕೋರಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಅವಕಾಶಗಳನ್ನು ಗಮನಿಸಿ ಸಹಕಾರ ನೀಡುವ ಪ್ರಯತ್ನ ಮಾಡುದಾಗಿ ತಿಳಿಸಿದರು. ಇದೇ ಸಂದರ್ಭ ಈಜು ಗುರುಗಳಾದ ಗೋಪಾಲ ಅಡಿಗ ಅವರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು. ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಮುರುಳಿಧರ ನಾಯಿರಿ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಅನಂತಪದ್ಮನಾಭ ಐತಾಳ್, ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಅನಂತ ಶ್ಯಾನುಭಾಗ್, ಸ್ವಿಮ್ಮಿಂಗ್ ಕ್ಲಬ್‌ನ ನಿತ್ಯಾನಂದ ಶ್ಯಾನುಭಾಗ್, ಹೊಸ ಕಾರ್ಕಡ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಸುಮತಿ ನಾಯಿರಿ ಉಪಸ್ಥಿತರಿದ್ದರು.
ಸ್ವಿಮ್ಮಿಂಗ್ ಕ್ಲಬ್‌ನ ಚಂದ್ರಶೇಖರ ಅಡಿಗ ಪ್ರಸ್ತಾವಿಸಿದರು. ಶಿಕ್ಷಕ ಸಾಹಿತಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ವೆಂಕಟೇಶ್ ಭಟ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ವಿಮ್ಮಿಂಗ್ ಸ್ಪರ್ಧೆ ನಡೆಯಿತು. ಅಂತರಾಷ್ಟ್ರೀಯ ಈಜುಪಟು ಗೋಪಾಲ ಅಡಿಗ ನಿರ್ಣಾಯಕರಾಗಿದ್ದರು.

Exit mobile version