ಶಿರೂರು: ಇಲ್ಲಿನ ಉತ್ಸವ ಸಮಿತಿ ಶಿರೂರು ಹಾಗೂ ಅರುಣ್ ಪಬ್ಲಿಸಿಟಿ ಶಿರೂರು ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿಯ ಸಾಂಸ್ಕ್ರತಿಕ ವೈಭವ “ಶಿರೂರು ಉತ್ಸವ 2015″ ಕಾರ್ಯಕ್ರಮ ಎಪ್ರಿಲ್ 17ರಿಂದ 19ರ ವರೆಗೆ ಶಿರೂರು ಪ.ಪೂ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಎಪ್ರಿಲ್ 17ರಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್.ಯಡ್ಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂಕಿತಾ ನಾಯ್ಕ ಮತ್ತು ಸೌಜನ್ಯ ಬಿಲ್ಲವ ಮುಂಬಯಿ ಹಾಗೂ ಸ್ಥಳೀಯರಿಂದ ನಡೆಯಲಿದ್ದು ರಾತ್ರಿ 9 ಗಂಟೆಯಿಂದ ಸೋನಿ ಟಿವಿ ಪ್ರಶಸ್ತಿ ವಿಜೇತ ಭಾರ್ಗವಿ ಉಡುಪಿ ಇವರಿಂದ ಭಾವ-ಯೋಗ-ಗಾನ-ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ.
ಎಪ್ರಿಲ್ 18ರಿಂದ ಬೆಳಿಗ್ಗೆ ಯೋಗ ಕಾರ್ಯಕ್ರಮ ನಡೆಯಲಿದೆ. ಜಾನುವಾರು ಪ್ರದರ್ಶನವನ್ನು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಉದ್ಘಾಟಿಸಲಿದ್ದಾರೆ. ಬೃಹತ್ ವಸ್ತು ಪ್ರದರ್ಶನ, ಕವಿಗೋಷ್ಟಿ ಹಾಗೂ ವಿಚಾರ ಸಂಕೀರಣವನ್ನು ಉದಯವಾಣಿ ದಿನಪತ್ರಿಕೆಯ ಸಂಪಾದಕ ಡಿ.ವಿ.ಬಾಲಕೃಷ್ಣ ಹೊಳ್ಳ ಉದ್ಘಾಟಿಸಲಿದ್ದಾರೆ.ಅಪರಾಹ್ನ 2ರಿಂದ ಜಬ್ಬಾರ್ ಸುಮೋ,ವಾಸುದೇವ ರಂಗ ಭಟ್,ಅಶೋಕ ಭಟ್,ಸುರೇಶ ಶೆಟ್ಟಿ, ಮುಂತಾದ ಕಲಾವಿದರ ಕೂಡುವಿಕೆಯಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಹಾಟ್-ಫಿಸ್ಟನ್ಸ್ ಮಣಿಪಾಲ ತಂಡದಿಂದ “ಬಕ್ ಸ್ಟಂಟ್” ಸಾಹಸ ಪ್ರದರ್ಶನಗೊಳ್ಳಲಿದೆ. ರಾತ್ರಿ 8ರಿಂದ ಕರ್ನಾಟಕ ಜಾನಪದ ಕಲಾ ವೈವಿದ್ಯ ಪ್ರದರ್ಶನಗೊಳ್ಳಲಿದೆ.
ಎಪ್ರಿಲ್ 19ರಂದು ಬೆಳಿಗ್ಗೆ 9 ಗಂಟೆಗೆ ವಿಜಯ ಬ್ಯಾಂಕ್ ಪ್ರಾಯೋಜಿಕತ್ವದ ಬೃಹತ್ ಸ್ವಚ್ಚತಾ ಮ್ಯಾರಾಥನ್ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಭೂ ಸೇನೆಯ ಲೆಪ್ಟಿನೆಂಟ್ ಕರ್ನಲ್ ರಂಜಿತ್ ಕುಮಾರ್ ಶಿರೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯ ಬ್ಯಾಂಕ್ ವಲಯ ಪ್ರಬಂಧಕ ರಾದ ಶಾಲಿನಿ ಶೆಟ್ಟಿ ವ್ಯವಸ್ಥಾಪಕ ಸತೀಶ ಶೆಟ್ಟಿ ಮುಂತಾದವರು ಉಪಸ್ಥಿತರಿರಲಿದ್ದಾರೆ. ಆದರ್ಶ ಆಸ್ಪತ್ರೆ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ರಾಜಾ ಉದ್ಘಾಟಿಸಲಿದ್ದಾರೆ. ಹಿರಿಯ ಹೃದ್ರೋಗ ತಜ್ಞ ಆದರ್ಶ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ| ಜಿ.ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಕರ್ನಾಟಕ ಸರಕಾರದ ಪಂಚಾಯತರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್, ಅರಣ್ಯ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಬಂದರು ಮತ್ತು ಕ್ರೀಡಾ ಸಚಿವ ಅಭಯ್ಚಂದ್ರ ಜೈನ್, ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಶಿರೂರು ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶು, ಮಣೆಗಾರ್ ಮೀರಾನ್ ಸಾಹೇಬ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ, ನಿರಂತರ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಧಾರಾವಾಹಿ ನಟಿಯರಾದ ವೀಣಾ ಬಾಲಾಜಿ, ಚೈತ್ರಾ ರೈ, ಧನುಜಾ, ವಿದ್ಯಾಮೂರ್ತಿ, ಚಿತ್ರಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ಸೈಯದ್ ಅಬ್ದುಲ್ ಖಾದರ್ ಬಾಶು, ಕಾರ್ಯಕ್ರಮ ಸಂಯೋಜಕ ಅರುಣ್ ಕುಮಾರ್ ಶಿರೂರು, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.