Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜೀವನಮೌಲ್ಯ ಶಿಕ್ಷಣ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲೌಕಿಕ ಶಿಕ್ಷಣದಿಂದ ಬದುಕು ಹಸನಾಗಲು ಸಾಧ್ಯವಿಲ್ಲ. ಆಂತರಿಕವಾದ ಮನಸಿನಲ್ಲಿ ಒಳ್ಳೆಯ ಜೀವನಾದರ್ಶಗಳ ಶಿಕ್ಷಣದ ಅಗತ್ಯತೆ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟರು.

ಅವರು ಇಅಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ನೆರವಿನೊಂದಿಗೆ ನಡೆದ ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವೆನ್ನುವುದು ನಮ್ಮ ಬದುಕಿನ ಅತಿಮುಖ್ಯವಾದ ಹಂತವಾಗಿದೆ. ಬದುಕು ಸಾಗಿಸಲು ಲೌಕಿಕ ಶಿಕ್ಷಣ ನೆರವಾಗುತ್ತದೆ. ಆದರೆ ಒಳ್ಳೆಯ ಬದುಕು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸುಸಂಸ್ಕೃತವಾಗಲು, ಗೌರವಾನ್ವಿತರಾಗಲು ಇಂಥ ಜೀವನ ಮೌಲ್ಯ ಶಿಕ್ಷಣ ಬೇಕಾಗುತ್ತದೆ. ಸ್ವತಂತ್ರ ಚಿಂತನೆಗೆ , ಉಜ್ವಲ ಭವಿಷ್ಯಕ್ಕೆ ಇಂಥ ಶಿಕ್ಷಣ ಶಿಬಿರಗಳು ನೆರವಾಗುತ್ತವೆ. ಸಂಸ್ಥೆಯ ಈ ಕಾರ್ಯಕ್ರಮ ಇತರ ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.

ದಿನನಿತ್ಯದ ಬದುಕಿನಲ್ಲಿ ಸಾಮಾಜಿಕ ವ್ಯವಸ್ಥೆಯೊಂದಿಗೆ ಒಡನಾಡುವಾಗ ನಮ್ಮೊಂದಿಗೆ ಇರುವವರೊಂದಿಗೆ ಗೌರವದಿಂದ ವ್ಯವಹರಿಸಬೇಕು. ಮುಖ್ಯವಾಗಿ ಗುರು-ಹಿರಿಯರನ್ನು ಗೌರವಿಸುವುದು ಮೊದಲ ಆದ್ಯತೆಯಾಗಿರಬೇಕು. ಪಾರದರ್ಶಕತೆ, ವೃತ್ತಿನಿಷ್ಠೆ, ಪ್ರಾಮಾಣಿಕತೆ, ಸತ್ಯಸಂಧತೆ, ಸಜ್ಜನಿಕೆ ಉತ್ತಮ ಜೀವನವನ್ನು ರೂಪಿಸಲು ಅಗತ್ಯವಾಗಿದೆ. ಅವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಮಾತನಾಡಿ ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ. ಆದರೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಭಾರತೀಯ ಶಿಕ್ಷಣ ಪರಂಪರೆಗೆ ವಿಶಿಷ್ಠ ಸ್ಥಾನಮಾನವಿದೆ. ಅದರಲ್ಲಿ ಜೀವನಮೌಲ್ಯಗಳ ಕುರಿತು ತಿಳಿಸಲಾಗುತ್ತಿತ್ತು. ಇಂದಿನ ದಿನಗಳಲ್ಲೂ ಶಿಕ್ಷಣವು ಮಾನವೀಯ ಮೌಲ್ಯಗಳನ್ನು ತಿಳಿಸಿ ವಿದ್ಯಾರ್ಥಿಗಳ ಸರ್ವತೋಮುS ಬೆಳವಣಿಗೆಗೆ ಸಹಾಯಕವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥರಾದ ಪ್ರಕಾಶ ಸೋನ್ಸ್, ಪ್ರಜ್ನೇಶ್ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಅರುಣಾಚಲ ಮಯ್ಯ, ಕಾರ್ಯಕ್ರಮ ಸಂಯೋಜಕರಾದ ಪ್ರೊ. ಸತ್ಯನಾರಾಯಣ, ವಿಶ್ರಾಂತ ಆಂಗ್ಲ ಭಾಷಾ ಉಅಪನ್ಯಾಸಕರಾದ ಡಾ.ಪಿ.ಶಾಂತಾರಾಮ ಪ್ರಭು, ನಿಟ್ಟೂರು ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು., ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರದ ಜಿ.ಎಂ.ಗೊಂಡ ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಮಂಕುತಿಮ್ಮನ ಕಗ್ಗಗಳ ಮತ್ತು ಸಂತ ಶಿಶುನಾಳ ಶರೀಫರ ಹಾಡುಗಳ ಗಾಯನ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿಗೆ ಮೂರು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಕಾಲೇಜಿನ ವಿಶ್ವಸ್ಥರಾದ ಪ್ರಕಾಶ ಸೋನ್ಸ್ ಮತ್ತು ಶ್ರೀಮತಿ ಶೋಭಾ ಸೋನ್ಸ್ ದಂಪತಿಗಳನ್ನು ಗೌರವಿಸಲಾಯಿತು. ಅಲ್ಲದೇ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್‌ನಲ್ಲಿರುವ ಸುಸಜ್ಜಿತ ವೇದಿಕೆಯನ್ನು ಶ್ರೀಮತಿ ಶೋಭಾ ಮತ್ತು ಪ್ರಕಾಶ್ ಸೋನ್ಸ್ ವೇದಿಕೆ ಎಂದು ಕರೆಯಲಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ತಿಳಿಸಿದರು.

ಪುರಾಣ ಇತಿಹಾಸದಲ್ಲಿ ವಿದ್ಯಾರ್ಥಿ ಧರ್ಮ ಕುರಿತು ವಿಶ್ರಾಂತ ಆಂಗ್ಲ ಭಾಷಾ ಉಪನ್ಯಾಸಕರಾದ ಡಾ.ಪಿ.ಶಾಂತಾರಾಮ ಪ್ರಭು, ನಿಟ್ಟೂರು ಮಾತನಾಡಿದರು.
ಉಡುಪಿಯ ಎಂ.ಜಿ.ಎಂ.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಎಂ.ಎಲ್.ಸಾಮಗ ಭಾರತೀಯ ಸಂಸ್ಕೃತಿಯಲ್ಲಿ ಮಾತಿನ ಮಹತ್ವ ಕುರಿತು ಮತ್ತು ಶಿಕ್ಷಣದಲ್ಲಿ ಹೊಸತನ ಕುರಿತು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ.ಶ್ರೀಶ ಕುಮಾರ್ ಎಂ.ಕೆ ಮಾತನಾಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಪ್ರಾಂಶುಪಾಲರದ ಪ್ರೊ. ನಿತ್ಯಾನಂದ ಗಾಂವಕರ ಮಾತನಾಡಿ ಇಂದಿನ ಕೊಳ್ಳುಬಾಕತನ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ನಮ್ಮತನವನ್ನು ಅರಿತು ಬದುಕಬೇಕು. ಹಾಗಿದ್ದಾಗ ಜೀವನವನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೇ ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಜೀವನ ಮೌಲ್ಯ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ವಿದ್ಯಾರ್ಥಿಗಳಾದ ಸತ್ಯ ದೇವಾಡಿಗ, ವಿಧಾತ್ರಿ ಭಟ್, ಶ್ರೀಲತಾ ಮತ್ತು ನಾಗೇಶ್ ಶಾನಭಾಗ್ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಉಪಾನ್ಯಾಸಕ ಅರುಣ್ ಎ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Exit mobile version