ಬೆಂಗಳೂರು: ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಆರನೇ ವರ್ಷದ ಸಂಭ್ರಮ ಎಪ್ರಿಲ್ 4 ರಂದು ಎನ್‌ಕೌಂಟರ್ ಕಿಂಗ್ ಖ್ಯಾತಿಯ ದಯಾನಾಯಕ್ ಹುಟ್ಟೂರು ಎಣ್ಣೆಹೊಳೆಯ ಹಂಚಿಕಟ್ಟೆ ಶ್ರೀ ಮಹಮ್ಮಾಯಿ ದೇವಾಲಯದ ಆವರಣದಲ್ಲಿ ಸಂಜೆ 5 ರಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಮತ್ತು ಉಪಾಧ್ಯಕ್ಷ ದಿನೇಶ ಹೊಸಂಗಡಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನವನ್ನು ಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿ ಮತ್ತು ಮಕ್ಕಳ ಪ್ರತಿಭೋತ್ಸವವನ್ನು ಝೀಟಿವಿಯ ಸರಿಗಮ ಲಿಟ್ಲ್ ಚಾಂಪ್ ಉಡುಪಿಯ ಗಗನ್ ಗಾಂವ್‌ಕರ್ ಉದ್ಘಾಟಿಸಲಿರುವರು.
ಈ ಬಾರಿ ಗೌರವ ವಿಜೇತರ ಅನುಭವ ಗೋಷ್ಠಿಯನ್ನು ವಿಭಿನ್ನವಾಗಿ ಆಯೋಜಿಸಲಾಗಿದೆ. ತುಳು ಸಾಹಿತ್ಯ ಚರಿತ್ರೆಯ ಬಗ್ಗೆ ಎನ್‌ಎಸ್‌ಎಸ್ ರಾಜ್ಯ ಮಟ್ಟದ ಅಧಿಕಾರಿ ಬೆಂಗಳೂರಿನ ಡಾ.ಗಣನಾಥ ಎಕ್ಕಾರು, ಕಾವ್ಯ ಪ್ರವೇಶದ ಕುರಿತು ಮುದ್ದಣ ಕಾವ್ಯ ಪ್ರಶಸ್ತಿ ಪುರಷ್ಕೃತ ಕವಿ ಕೆ.ಪಿ ಮೃತ್ಯುಂಜಯ, ಕಥನ ಕುತೂಹಲದ ಬಗ್ಗೆ ಕಾದಂಬರಿಕಾರ ಅನುಬೆಳ್ಳೆ ವಿಶೇಷ ಮಾತುಕತೆ ನಡೆಸಲಿದ್ದು ಸಂವಾದ ನಡೆಯಲಿದೆ.
ಬಹುಭಾಷಾ ಕವಿಗೋಷ್ಟಿಯಲ್ಲಿ ತುಳು- ಕನ್ನಡ ಭಾಷೆಯಲ್ಲಿ 50 ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದು ಖ್ಯಾತ ಕವಯತ್ರಿ ಜ್ಯೋತಿ ಗುರುಪ್ರಸಾದ್ ಅವರು ಅಧ್ಯಕ್ಷತೆ ವಹಿಸಿ ಪ್ರತಿ ಹತ್ತು ಕವಿತೆಗಳಿಗೊಮ್ಮೆ ವಿಮರ್ಶೆಯ ಮಾತುಗಳನ್ನಾಡಲಿದ್ದಾರೆ. 15 ಮಂದಿ ವಿದ್ಯಾರ್ಥಿ ಪ್ರತಿಭೆಗಳು ಪ್ರದರ್ಶನ ನೀಡಲಿದ್ದು ಅವರಿಗೆ ಕರ್ನಾಟಕ ಪ್ರತಿಭಾ ರತ್ನ ಗೌರವ ಮತ್ತು ಹತ್ತು ಮಂದಿ ಯುವ ಸಾಧಕರಿಗೆ ಯುವ ಗೌರವ, 15 ಮಂದಿ ಸಾಧಕರಿಗೆ ಕರ್ನಾಟಕ ಸಾಧಕ ರತ್ನ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ.
ಸಾವಿತ್ರಿ ಮನೋಹರ್ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಗೋಷ್ಠಿಯಲ್ಲಿ ತುಳುನಾಡಿನ ಮಹಿಳಾ ಸಾಧಕಿಯರ ಬಗ್ಗೆ ಪ್ರೊ. ನಾರಾಯಣ ಶೇಡಿಕಜೆ ಮತ್ತು ಮಹಿಳೆಯರ ಸಾಧನೆಯ ಹಾದಿ ಮತ್ತು ಆತಂಕಗಳು ಕುರಿತು ಪ್ರೊ. ವನಿತಾ ಶೆಟ್ಟಿ ಮಾತನಾಡುವರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತ ಶಿವಸುಬ್ರಮಣ್ಯ ವಹಿಸಲಿದ್ದು ಸಮ್ಮೇಳಾಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಮೂರು ಹಂತದಲ್ಲಿ ಅಧ್ಯಕ್ಷ ಭಾಷಣ ಮಾಡಲಿರುವರು. ಅತಿಥಿಗಳಾಗಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ಕಸಾಪ ಅಧ್ಯಕ್ಷ ಬಿ.ಸಿ ರಾವ್ ಶಿವಪುರ, ಮೊಹಮ್ಮದ್ ಆಲಿ ಅಬ್ಬಾಸ್, ಆಸ್ಟ್ರೋ ಮೋಹನ್, ದೇವಸ್ಯ ಶಿವರಾಮ ಶೆಟ್ಟಿ, ಕೆಂಜಿಲ ಸಾಧು ಶೆಟ್ಟಿ, ನಾರಾಯಣ ಕೊಟ್ಟಾರಿ, ಎಂ,ಕೆ.ವಿಜಯ್ ಕುಮಾರ್, ಕಿಶೋರ್ ಕುಮಾರ್ ಶೆಟ್ಟಿ, ಅರುಣ್ ಭಟ್, ಡಾ.ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿರುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕೋಟ ಶ್ರೀನಿವಾಸ ಪೂಜಾರಿ, ಎಚ್.ಗೋಪಾಲ ಭಂಡಾರಿ, ಗಣೇಶ್ ಕಾರ್ಣಿಕ್, ಶ್ರೀಪತಿ ಭಟ್, ಹೆಬ್ರಿ ಭಾಸ್ಕರ ಜೋಯಿಸ್, ಶ್ಯಾಮ ನಾಯ್ಕ್ ಮೊದಲಾದವರ ಉಪಸ್ಥೀತಿಯಲ್ಲಿ ಸಾಧಕರಿಗೆ ಗೌರವ ಸಲ್ಲಿಸಲಿದ್ದಾರೆ.
ಕರ್ನಾಟಕ ದಂಪತಿ ರತ್ನ ವಿಶೇಷ ಗೌರವಕ್ಕೆ ಡಾ.ಮಹಾಬಲೇಶ್ವರ ರಾವ್ ಮತ್ತು ಸುಕನ್ಯಾ ಕಳಸ ದಂಪತಿ ಆಯ್ಕೆ ಆಗಿದ್ದಾರೆ.
ಖ್ಯಾತ ಕಲಾವಿದ- ರಂಗಕರ್ಮಿ ಮಂಗಳೂರಿನ ಕೆ.ವಿ ರಮರ್ಣ ನಿರ್ದೇಶನದ ಬಹುಚರ್ಚಿತ ಮಕ್ಕಳ ಹಾಸ್ಯ ನಾಟಕ ತಾಳ ಮದ್ದಳೆ, ನಿತೀಶ್ ಪಿ.ಬೈಂದೂರು ಅವರ ಛಾಯಾಚಿತ್ರ ಪ್ರದರ್ಶನ ಮತ್ತು ಅಯನಾ.ವಿ.ರಮಣ್ ಅವರ ಜ್ಙಾಪಕ ಶಕ್ತಿ ಪ್ರದರ್ಶನ ಸಹಿತ ಅನೇಕ ವಿಶೇಷತೆಗಳು ಇವೆ.
ಸಾಹಿತ್ಯಾಸಕ್ತರಿಗೆ ಉಚಿತ ಪ್ರವೇಶವಿದ್ದು ಹೆಸರುಗಳನ್ನು ವ್ಯವಸ್ಥೆಯ ದೃಷ್ಟಿಯಿಂದ 9886985573/ 8710978493 ದೂರವಾಣಿಗೆ ಮೆಸೇಜ್ ಮಾಡುವ ಮೂಲಕ ನೋಂದಾಯಿಸಬಹುದು.