Kundapra.com ಕುಂದಾಪ್ರ ಡಾಟ್ ಕಾಂ

ಎರ್ಡ್ ಗೆರಿ ಕೊಪಿ ಪುಸ್ತಕ

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ
ರಾತ್ರಿ ಆಟಕ್ಕೆ ಹೊಯಿ ಬೆಳಿಗ್ಗೆ ನಾಲ್ಕ್ ಗಂಟಿಗೆ ಮನಿಗೆ ಬಂದು ಮನಿಕಂಡನಿಗೆ, ”ಡೈರಿಗೆ ಹಾಲು ಕೊಡುಕ್ ಹ್ವಾತಿಲ್ಯನಾ, ಇವತ್ತ್ ಶಾಲಿ-ಗೀಲಿ ಇಲ್ಯ ಹಂಗಾರೆ, ಸೂರ್ಯನ ಬೆಳಕಿನ ರಾಪ್ ಮುಂಗಾಲ್ಗೆಂಟ್ ವರಿಗ್ ಬಂತಲೆ.. ಗಡಾ.. ಎಂತ ಏಳುದಿಲ್ಯಾ..” ಅಂದೇಳಿ ಕೆಮಿ ಗೆಂಡಿ ಹೊಟ್ಟಿ ಹ್ವಾಪುವಂಗೆ ಅಮ್ಮ ಕೂಗದ್ ಕೂಡ್ಲೆ ಅಯ್ಯೋ ದೇವ್ರೆ, ಇವತ್ತ್ ಶಾಲಿ ಇತ್ತಲ್ದಾ. ನಿನ್ನೆ school punish1ಹೋಮ್ ವರ್ಕ್ ಕೊಟ್ಟಿರ್, ಅದ್ ಇನ್ನೂ ಬರಿಲಿಲ್ಲ, ಕನ್ನಡ, ಹಿಂದಿ, ಇಂಗ್ಲಿಷ್ ಎರಡೆರಡು ಪೇಜು ಕಾಪಿ ಬರಿಕ್. ನಿನ್ನೆ ಸಮ ಮಾಡಿ ಕೊಪಿ ಬರ್ದ್ಕಂಡ್ ಹೊಯಿದಿದ್ದಕ್ಕೆ ಒಂದು ಪೇಜ್ ಜಾಸ್ತಿ ಬರುಕ್ ಹೇಳಿರ್. ಇವತ್ತ್ ಜಯಲಕ್ಷ್ಮಿ ಮೇಡಂ ಲಾಯ್ಕ್ ಮಾಡಿ ಬರ್ದ್ಕಂಡ್ ಹೊಯಿದೆ ಇದ್ರೆ, ಕೊಂದೆ ಹಾಕತ್ರ್..” ಅಂದೇಳಿ ಮೈ ಎಲ್ಲ ಬಿಸಿ ಆಪು ಶುರುವಾದ ಕೂಡ್ಲೆ, ಚಾಪೆಯಿಂದ ರಪ್ಪ ಮಂಡಿ ಕೊಡ್ಕಂಡ್ ಗಂಟಿ ಕಾಂತಿ, ಗಂಟಿ 8. “ನಾನಿನ್ನೂ ಕಾಪಿ ಬರಿಲಿಲ್ಲ, ನೀನೆ ಡೈರಿಗೆ ಹಾಲು ತಕಂಡ್ ಹೊಗ್” ಅಂದೇಳಿ ಹೇಳುವ ಅಂದ್ ಬಾಯಿ ಬಿಡುರೊಳ್ಗೆ ಅಜ್ಜಯ್ಯ ಎದುರಿಗ್ ಬಂದ್ರ್. ನಿನ್ನೆ ರಾತ್ರಿ ಆಟಕ್ಕೆ ಹ್ವಾಪುವತಿಗೆ “ಎನಾ.. ರಾತ್ರಿ ಸಂಚಾರ ಇತ್ತಿಚಿಗ್ ಜೋರ್ ಆತಿತ್ತಲ್ದನಾ, ಹೋಮ್ ವರ್ಕ್ ಎಲ್ಲ ಮಾಡಿ ಮುಗ್ಸಿದೆ ಅಲ್ದಾ? “ ಅಂದೇಳಿ ಕೆಂಡಾಗಳಿಕೆ, ಸಂಬಾವಿತನ ಹಾಗೆ “ಓ, ಶಾಲಿಯಿಂದ ಬಂದ್ ಕೂಡ್ಲೆ ಎಲ್ಲ ಬರೆದು ಮುಗ್ಸಿದಿ. ಯಾವ್ದೂ ಬಾಕಿ ಬೆಚ್ಲಿಲ್ಲ.” ಅಂದೇಳಿ ಅಜ್ಜಯ್ಯನ ಹತ್ರ ಹೇಳಿ, 5 ರೂಪಾಯಿ ಬೇರೆ ಕರ್ಚಿಗ್ ಅಂದೆಳಿ ತಕಂಡಿದಿ. ಈಗ ನಂಗೆ ಕಾಪಿ ಬರುಕ್ ಇತ್ತ್ ಅಂದ್ರೆ, ಗ್ಯಾರೆಂಟಿ ಚರ್ಮ ಸುಲಿದೆ ಹಾಕತ್ರ್. ಇವ್ರಿಗಿಂತ ಜಯಲಕ್ಷ್ಮಿ ಟೀಚರೇ ಅಡ್ಡಿಲ ಅನ್ನಿಸಿ, ಮುಖಕ್ಕೆ ನೀರ್ ಹಾಕಿ, ಓಡಿ ಹೊಯಿ ಹಾಲನ್ನ ಡೈರಿಗೆ ಕೊಟ್ಟಿಕೆ ಬಂದಿ. ಮನಿಗ್ ಬಪ್ಪತಿಗ್ ಗಂಟಿ 8:30 . ಇನ್ನ್ ಇಲ್ಲ್ ಕೂಕಂಡ್ ಬರುಕ್ ಆತಿಲ್ಲ. ಈಗ ಕೋಪಿ ಬರುದನ್ನ ಅಜ್ಜಯ್ಯ ಕಂಡ್ರೆ ಮತ್ತೆ ಗ್ವಾಂಕಿ ಮೆಟ್ಟತ್ರ್ ಅಂದೆಳಿ ಚಪ್ಪಿ ಮುಖದೆಗೆ ಕಾಖಿ ಚಡ್ಡಿ ಹಯ್ಕಂಡ್, ಎರಡ್ ಓಡ್ ದ್ವಾಸಿ ಮುಕ್ಕಿ, ಮನಸ್ಸಿಲ್ಲದ ಮನಸಿನೆಗೆ ಶಾಲಿಗ್ ಹೊರಟಿ.

“ಯಂತ ಆಯ್ತ್ ಗಡ, ಹೊಟ್ಟಿ ನೋವಾನ?, ಮುಖ ಚಣ್ಣದ್ ಮಾಡ್ಕಂಡಿದಿಯಲ, ಹುಷಾರ್ ಇಲ್ದಿರೆ ಶಾಲಿಗ್ ಹ್ವಾಪುದ್ ಬ್ಯಾಡ ಇವತ್ತ್. ಹೊಯಿ ಮನಿಕೊ” ಅಮ್ಮ ನನ್ನ ಚಪ್ಪಿ ಮುಖ ಕಂಡ್ಅಂದಳ್. ಅವಳು ಹೀಂಗ್ ಅಂದದ್ದೇ ತಡ, ನನ್ನ ಮುಖ ನೀರ್ ಚಿಮ್ಸದ್ದ್ ಗುಲಾಬಿ ಹೂವಿನ ಕಂಡೆಗೆ ಅರಳುಕೆ ಶುರು ಆಯ್ತ್. “ಅಯ್ಯಬ್ಯೆ, ಆ ಟೀಚರ್ ಹತ್ರ ಬಡ್ಗಿ ತಿಂಬುದ್ ಉಳಿತ್, ಇನ್ನೊಂಚೂರ್ ಓವರ್ ಆಕ್ಟಿಂಗ್ ಮಾಡ್ರೆ, ಎಲ್ಲರೂ ಹೊಟ್ಟಿ ನೋವು ಹೌದ್ ಅಂದೆಳಿ ಮಾಡ್ಕಂತ್ರ್. ಇದೇ ಒಳ್ಳೆ ಐಡ್ಯಿ. ಆಚಿಗೆ ಟೀಚರ್ ಹತ್ರನೂ ಬೈಸ್ಕಂಬುದ್ ತಪ್ಪತ್ತ್. ಅಜ್ಜಯ್ಯನ ಬೈಗುಳನೂ ತಪ್ಪತ್ತ್. ಗಟ್ಟಿ ಮಾಡಿ ಒಂದ್ ಬಳಾಲ್ ನಿದ್ರಿಯೂ ಮಾಡ್ಲಕ್. ಒಂದೇ ಕಲ್ಲೆಗೆ, ಇಡೀ ಎಂಕಲ್ ಮಾವಿನಕಾಯಿ ಬಿದ್ದಂಗ್ ಅಯ್ತ್. ” ಅಂದೆಳಿ ಮನಸಿನಲ್ಲೆ ಎಲ್ಲ ಪೂರ್ವ ತಯಾರಿ ಮಾಡುವತಿಗೆ ಅಜ್ಜಯ್ಯ ಬಾಯಿ ಹಾಕ್ರ್. “ಅವ್ನಿಗೆ ರಾತ್ರಿಗೆ ಆಟಕ್ಕೆ ಹ್ವಾಪುಕೆ ಎಂತ ಸುರುವಾಯ್ಲ, ಬೆಳಿಗ್ಗೆ 8 ಓಡ್ ದ್ವಾಸಿ ತಿಂಬುವತಿಗೂ ಸಮ ಇದಿದ. ಈಗ ಶಾಲಿಗ್ ಹ್ವಾಪುವತಿಗೆ ಹೊಟ್ಟಿ ನೋವು ಸುರುವಾತ್ತ್ ಅಲ್ದನಾ..? ಮುಚ್ಕಂಡ್ ಶಾಲಿಗೆ ಹೊಯ್ದಿರೆ ಹುಣ್ಸಿ ಕೋಲ್ ಹೊಡಿ ಮಾಡ್ತನಾ ಇಲ್ಯಾ ಕಾಣ್.. “ ಅಂದದ್ದೇ ತಡ ನಾವು ಕುಟ್ಟಿ ಲಗಾಸಿ ಪಡ್ಚ. ಅಂತೂ ಇಂತೂ ನಮ್ಮ ನಸಿಬೆ ಇವತ್ತ್ ಸಮ ಇಲ್ಲ ಅಂದೆಳಿ ಗೊತ್ತಾರ್ ಮೇಲೆ ಇನ್ನ್ ಯೋಚ್ನಿ ಮಾಡಿ ಏನು ಪ್ರಯೋಜನ ಇಲ್ಲ. ಸರಿಯಾದ ಸಮಯಕ್ಕಾದ್ರೂ ಶಾಲಿಗ್ ಹೊಯಿ, ತಡು ಬಂದಿದೆ ಅಂದೆಳಿ ಬೈಸ್ಕಂಬುದ್ ತಪ್ಪಸ್ಕಂಬ ಅಂದೆಳಿ ಶಾಲಿಗ್ ಓಡಿ ಬಂದಿ. ಮೊದಲನೇ ಬೆಲ್ ಹೊಡ್ದಾಯೆತ್. ಆಚಿ-ಈಚಿಗೆ ಕಂಡ್ರೆ ಮಾಷ್ಟರ್ ಓಡಾಡ್ತಿದ್ದರ್. ಮೊದಲನೇ ಪಿರೆಡ್ ಕನ್ನಡ. ಕೋಪಿ ಬರಿಲಿಲ್ಲ ಅಂದೆಳಿ ಗೊತ್ತಾರೆ ಕೈ ಮೇಲೆ ಫೀಟ್ರೋಲೆಗೆ ಬಡ್ಗಿ ಗ್ಯಾರಂಟೀ. ಇನ್ನೆಂತ ಸಾವುದ್ ಹಗೂರ ಕೋಪಿ ಪುಸ್ತಕ ತೆಗದು ಡೆಸ್ಕ್ ಕೆಳಗೆ ಇಟ್ಕಂಡ್, ಡೆಸ್ಕ್ ಅಡಿ ಮಂಡಿ ಹಾಕಿ ಬರುಕ್ ಶುರು ಮಾಡಿದಿ. ಅದ್ ಯಾವ್ ಮಯ್ಕದೆಗೆ ನಿಂಗಪ್ಪ ಮಾಷ್ಟರು ಬಂದರೊ ಏನೊ, ಕೆಮಿ ಗೆಂಡಿ ತಿಪ್ಪಿ, ಕೋಪಿ ಪುಸ್ತಕ ತಕಂಡ್ ಹ್ವಾತ ಇದ್ರ್. ಅಲ್ಲಿಗೆ ಇವತ್ತ್ ನಮ್ಮ್ ಗ್ರಾಚಾರ ಕೆಟ್ಟಿತ್ ಅಂದೆಳಿ ಆಯ್ತ್. ಕಡಿಕೆ ಎಲ್ಲರತ್ರನೂ ಬಯಿಸ್ಕಂಡ್, ನಾಲ್ಕ್ ಪೆಟ್ಟ್ ತಿಂದ್ ಅಂತೂ ಇಂತೂ ಅವತ್ತಿನ ದಿನ ಕಳಿತ್. ಕೋಪಿ ಬರಿಲಿಲ್ಲ ಅಂದೇಳಿ ಇಡೀ ಪಿರೆಡ್ ಕ್ಲಾಸಿಂದ್ ಹೊರ್ಗ್ ನಿತ್ಕಂಡೂ ಆಯ್ತ್, ನಾಳೆ 10 ಪೇಜ್ ಕೋಪಿ ಬರ್ಕಂಡ್ ಬರ್ಕೇ, ಅಂದೇಳಿ ಆರ್ಡರೂ ಆಯ್ತ್. ಇದ್ ಆದಮೇಲೆ ಅದು ಎಂತಾ ಜೀವ್ ಹ್ವಾಪು ಕೆಲ್ಸ ಇದ್ರೂ, ಮನಿಗೆ ಬಂದ್, ಕಾಪಿ ಕುಡುಕಿದ್ರೆ ಮೊದ್ಲೇ ಕೋಪಿ ಬರುಕ್ ಶುರು ಮಾಡಿದೆ.

ನೀವ್ ಏನೇ ಹೇಳಿ ಮರ್ರೆ, ಪ್ರೈಮೆರಿ ಶಾಲಿಗೆ ಹ್ವಾಪು ಮಜವೆ ಬೇರೆ ಅಲ್ದೆ?. 200 ಪುಟ ಗೆರೆ ಪುಸ್ತಕ 4, 200 ಪುಟದ್ ಕಾಲಿ ಪುಸ್ತಕ 3, ಕನ್ನಡಕ್ಕೆ ಎರಡು ಗೆರೆ ಕಾಪಿ ಪುಸ್ತಕ, ಹಿಂದಿಗೆ ಮೂರು ಗೆರೆ ಕಾಪಿ ಪುಸ್ತಕ, ಇಂಗ್ಲಿಷಿಗೆ ನಾಲ್ಕು ಗೆರೆ ಕಾಪಿ ಪುಸ್ತಕ. ಇಷ್ಟ್ ಬೇಕೆ ಬೇಕು. ಪ್ರತಿ ದಿನ ಸರಿ ಮಾಡಿ ಹೋಮ್-ವರ್ಕ್ ಮಾಡದೆ ಇದ್ರೆ ನಾಳೆ ಮತ್ತೆ ಇನ್ನೊಂದಿಷ್ಟು ಹೋಮ್ ವರ್ಕ್. ಕೈವಾರ, ಕೋನಮಾಪಕ, ಫೂಟ್ರೋಲ್ ಇಲ್ದೆ ಇದ್ರೆ ಗಣಿತ ಕ್ಲಾಸ್ಸಿಗ್ ಬಪ್ಪುಕಿಲ್ಲ. ಆಮೇಲೆ ಒಂದು ಒಳ್ಳೆ ಪೆನ್ನು, ಒಂದು ಪೆನ್ಸಿಲ್ಲು, ರಬ್ಬರು. ಆಗ ಕ್ಲಾಸ್ಸಿನೆಗೆ ಸ್ವಲ್ಪ ಲೆವೆಲ್ ಇರತ್ತ್. ಕಾಸ್ಟ್ಲಿ ಬಣ್ಣದ ಪೆನ್ಸಿಲ್ ಇದ್ರೆ ಮತ್ತೆ ಕೆಂಬುದೇ ಬ್ಯಾಡ, ರಾಜ ಮರ್ಯಾದೆ. ಅದು ಮಾಷ್ಟರು ತಪ್ಪುಕ್ ಹೇಳಿರೋ ಇಲ್ಯೊ, ಅಪ್ಪಯ್ಯನ ಹತ್ರ ಜಗಳ ಮಾಡಿ ಆದ್ರೂ, ಒಂದೊಪ್ಪತ್ ಊಟ ಬಿಟ್ಟಾದ್ರೂ ತಕಣ್ಕೆ. ಹಳೆ ನೆನಪನ್ನ ರಿವೈಡ್ ಮಾಡಿ ಕಂಡಾಗಳಿಕೆಲ್ಲ, ಆಗಳಿಕೆ ಅಮ್ಮ ಕೊಡ್ತಿದ್ದ 10 ರೂಪಾಯಿಗೆ ನಮ್ಮ ಆಸೆ ಎಲ್ಲತಿರುತಿತ್ತ್. ಈಗ ನಾವು ದುಡಿದ 1000 ರೂಪಾಯೆಗೆ ಬರಿ ಅವಶ್ಯಕತೆ ಮಾತ್ರ ನೆರವೇರತ್ತ್ ಅಂಬುದ್ ಮಾತ್ರ ದೇವ್ರಾಣೆ ಸುಳ್ಳಲ್ಲ. ಈಗಿನ ಮಕ್ಕಳಿಗೆ ಪಾಪ, ಶಾಲೆಗೆ ಕನ್ನಡ ಕೋಪಿ ಬರುಕ್ ಇರತ್ತೋ ಇಲ್ಯೋ. ನಿಮಗೂ ಈಗ ಕನ್ನಡ ಬರುದೆಲ್ಲ ನೆನಪ್ ಹೊಯ್ತೋ ಏನೊ ಅಲ್ದೇ?. ಒಂದು 2 ಗೆರೆ ಕಾಪಿ ಪುಸ್ತಕ ತಕಂಡ್ ಅಭ್ಯಾಸ ಮಾಡಿನಿಯೇ. ಎನಂತ್ರಿ.

Exit mobile version