Site icon Kundapra.com ಕುಂದಾಪ್ರ ಡಾಟ್ ಕಾಂ

ಎಲ್ಲೂರು: ಕಾಣೆಯಾಗಿದ್ದ ಯುವತಿ ಅಸ್ವಸ್ಥ ಸ್ಥಿತಿಯಲ್ಲಿ ಮನೆಗೆ. ಅನುಮಾನಗಳಿಗೆ ಎಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆಯಿಂದ ಕುಂದಾಪುರಕ್ಕೆ ಹೋಗಿಬರುವುದಾಗಿ ತೆರಳಿ ಮರಳಿ ಬಾರದೇ ಕಾಣೆಯಾಗಿದ್ದ ಯುವತಿ ಇಂದು ತೀರಾ ಅಸ್ವಸ್ಥ ಸ್ಥಿತಿಯಲ್ಲಿ ಮನೆಗೆ ಮರಳಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಗೆ ಮರಳಿದ ಬಳಿಕ ಯುವತಿಯ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಆಪಹರಣಗೈಯಲಾಗಿತ್ತೆ ಎಂಬ ಶಂಕೆ ವ್ಯಕ್ತವಾಗಿದೆ. kundapraa.com

ಕೊಲ್ಲೂರು ಸಮೀಪದ ಯಲ್ಲೂರಿನ ಯುವತಿ ಸೋಮವಾರ ಮನೆಯಿಂದ ಕುಂದಾಪುರಕ್ಕೆ ತೆರಳಿದ್ದವಳು ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರಾದರೂ ಸ್ಥಳೀಯರೋರ್ವರು ಹಿಂದಿರುಗಿ ಬರಬಹುದು ಎಂದು ಹೇಳಿದ್ದರಿಂದ ಸುಮ್ಮನಾಗಿದ್ದರು. ಇಂದು ಬೆಳಿಗ್ಗೆ ರಿಕ್ಷಾವೊಂದರಲ್ಲಿ ಮನೆಗೆ ಮರಳಿದ್ದ ಯುವತಿ ತೀರಾ ಅಸ್ವಸ್ಥಳಾಗಿರುವುದನ್ನು ಗಮನಿಸಿದ ಮನೆಯವರು ಕೂಡಲೇ ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಅಪಹರಣದ ಶಂಕೆ:
ಕುಂದಾಪುರಕ್ಕೆ ತೆರಳಿದ್ದ ಯುವತಿಯನ್ನು ಅಪಹರಣಗೈಯಲಾಗಿತ್ತೆ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಿಕರೂ ಇದಕ್ಕೆ ಪುಷ್ಠಿ ನೀಡುವಂತೆ ಮಾತನಾಡಿದ್ದು ಪ್ರಕರಣದಲ್ಲಿ ಒಟ್ಟು ಮೂವರ ಕೈವಾಡ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಯುವತಿಯೂ ದ್ವಂದ್ವ ಹೇಳಿಕೆ ನೀಡಿದ್ದು, ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version