Kundapra.com ಕುಂದಾಪ್ರ ಡಾಟ್ ಕಾಂ

ಭಗವಾನ್ ಶ್ರೀ ಕೃಷ್ಣ ಸರ್ವಕಾಲಿಕ ಶ್ರೇಷ್ಠ ವ್ಯಕ್ತಿ: ಜಯಶ್ರೀ ಮೊಗವೀರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವನಾಗಿ ಹುಟ್ಟಿ ದೈತ್ವಕ್ಕೇರಿದ ಶ್ರೀ ಕೃಷ್ಣ ಗುರು-ಹಿರಿಯರಲ್ಲಿ ಭಕ್ತಿ, ಬ್ರಾತ್ವತ್ವ, ಸ್ನೇಹ, ನಂಬಿಕೆ, ಸಂಬಂಧಗಳ ಮಹತ್ವ ಪ್ರಪಂಚಕ್ಕೆ ಅರುಹಿದ ಸರ್ವಕಾಲಿಕ ಶ್ರೇಷ್ಠ ವ್ಯಕ್ತಿ ಶ್ರೀ ಕೃಷ್ಣ ಪರಮಾತ್ಮ ಎಂದು ಕುಂದಾಪುರ ತಾಲೂಕ್ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಮತ್ತು ಕುಂದಾಪುರ ತಾಲೂಕು ಆಡಳಿತ ಆಶ್ರಯದಲ್ಲಿ ಕುಂದಾಪುರ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡುವ ಮೂಲಕ ಶ್ರೀ ಕೃಷ್ಣ ಸಂದೇಶ ಜನಸಾಮಾನ್ಯರಲ್ಲೂ ತುಂಬಲು ಸಹಕಾರಿಯಾಗಲಿದೆ ಎಂದ ಅವರು, ಶ್ರೀ ಕೃಷ್ಣನ ವ್ಯಕ್ತಿತ್ವ ಮೂಲಕ ಉತ್ತಮ ನಾಯಕತ್ವ ಗುಣ ಬೆಳಸಿಕೊಳ್ಳಲು ಪೂರಕವಾಗಲಿದೆ. ಶ್ರೀ ಕೃಷ್ಣಾವತಾರದ ಮೂಲಕ ದುಷ್ಟರ ನಿಗ್ರಹಿಸಿ, ಶಿಷ್ಟರ ಪಾಲಿಸಿ, ಶಾಂತಿ ಸೌಹಾರ್ದತೆ ಸ್ಥಾಪಿಸಿದ್ದು, ಕೃಷ್ಣನ ಆದರ್ಶಗಳ ಪಾಲನೆ ಮೂಲಕ ಕೃಷ್ಣ ತತ್ವ ನಮ್ಮ ಬದುಕಲ್ಲಿ ಅಳವಿಡಿಸಿಕೊಂಡರೆ ಎಲ್ಲರೂ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.

ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಮಾತನಾಡಿ ಅಧುನಿಕ ಬದುಕಿನ ಭರಾಟೆಯಲ್ಲಿ ಧರ್ಮ, ಧಾರ್ಮಿಕತೆ, ಆಚರಣೆ, ಸಂಸ್ಕೃತಿ ಭಾಂದವ್ಯತೆ ಮರೆಯಾಗುವ ಕಾಲಘಟ್ಟದಲ್ಲಿ ಧಾರ್ಮಿಕ ಆಚರಣೆಯ ಶ್ರೀ ಕೃಷ್ಣ ಜನ್ಮಾಷ್ಟಮಿ ಮೂಲಕ ಮತ್ತೆ ವಿಜ್ರಂಭಿಸಲು ಸಹಕಾರಿ. ದುಷ್ಟ ನಿಗ್ರಹಕ್ಕೆ ಶ್ರೀ ಕೃಷ್ಣಾವತಾರ ಎತ್ತದರೂ ಮಾನವ ಸಹಜವಾಗಿ ಬೆಳೆದು ದೈವತ್ವಕ್ಕೆ ಏರಿದಿ ಮಹಾಪುರುಷ ಕೃಷ್ಣ. ಧರ್ಮ ಹಾಗೂ ಧರ್ಮಿಷ್ಟರ ಪಕ್ಷಪಾತಿ ಕೃಷ್ಣ ಎಂದೂ ಅಧಿಕಾರಿಕ್ಕೆ ಆಸೆಪಟ್ಟವನಲ್ಲ. ಜನರೊಟ್ಟಿಗೆ ಬೆರೆತು ಕೃಷ್ಣ ಅಹಿಂಸಾವಾದದ ಮೂಲ ಪುರುಷ. ಕೃಷ್ಣ ಸರ್ವಕಾಲಿಕ ಸತ್ಯವಾಗಿದ್ದು, ಕೃಷ್ಣ ವಾಸ್ತವತಾ ವಾದಿಯಾಗಿದ್ದ. ಕೃಷ್ಣ ತತ್ವ ಎಂದಿಗೂ ಪ್ರಸ್ತುತ ಎಂದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ವಿಧಿವಿಧಾನ ಪುರೋಹಿತ ಮಹೇಶ್ ಭಟ್ ನೆರೆವೇರಿಸಿದರು. ಕುಂದಾಪುರ ಪುರಸಭೆ ಉಪಾದ್ಯಕ್ಷ ರಾಜೇಶ್ ಕಾವೇರಿ, ಮೀನುಗಾರಿಕಾ ನಿಗಮ ಅಧ್ಯಕ್ಷ ಬಿ.ಹಿರಿಯಣ್ಣ, ಕುಂದಾಪುರ ಪುರಸಬೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಜಿ.ಎಂ.ಬೋರ್ಕರ್, ಬೈಂದೂರು ವಿಷೇಶ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ, ಕುಂದಾಪುರ ಡಿಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ಇದ್ದರು.

ಅರೋಗ್ಯ ಇಲಾಖೆ ಅಧಿಕಾರಿ ಮಾನಿಷಾ ಪ್ರಾರ್ಥಿಸಿದರು. ಕುಂದಾಪುರ ಅಕ್ಷರದಾಸೋಹ ಅಧಿಕಾರಿ ಸೀತಾರಾಮ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಕುಂದಾಪುರ ವಲಯ ಶಿಕ್ಷಣಾಧಿಕಾರಿ ಶೊಭಾ ಎಸ್.ಶೆಟ್ಟಿ ವಂದಿಸಿದರು.

Exit mobile version