Kundapra.com ಕುಂದಾಪ್ರ ಡಾಟ್ ಕಾಂ

ನಿವೇಶನಕ್ಕೆ ಆಗ್ರಹಿಸಿ ಕೋಣಿ ಗ್ರಾ.ಪಂ ಗೆ ಮುತ್ತಿಗೆ

ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಹಾಗೂ ಕೋಣಿಯ ಮನೆ ನಿವೇಶನ ರಹಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೋಣಿ ಗ್ರಾ.ಪಂ. ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ ಕೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಿ, ಕಂದಾವರ ಗ್ರಾಮಗಳ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒಂದು ವರ್ಷದ ಹಿಂದೆಯೇ ಕೋಣಿ ಗ್ರಾ.ಪಂ. ಗೆ ಮೊದಲ ಹಂತದಲ್ಲಿ 329 ಹಾಗೂ ಎರಡನೇ ಹಂತದಲ್ಲಿ 43 ಅರ್ಜಿ ಹಾಕಿ ಆದ್ಯತೆಯ ಮೇರೆಗೆ ನಿರ್ಗತಿಕರಿಗೆ ನಿವೇಶನವನ್ನು ಮಂಜೂರು ಮಾಡುವಂತೆ ಕೋರಲಾಗಿತ್ತು. ಆದರೆ 372 ಅರ್ಜಿಗಳ ಪೈಕಿ 134 ಅರ್ಜಿಗಳನ್ನಷ್ಟೇ ಸ್ವೀಕರಿಸಿರುವ ಕೋಣಿ ಗ್ರಾ.ಪಂ ಉಳಿದ ಅರ್ಜಿಗಳನ್ನು ತಿರಸ್ಕರಿಸಿರುವುದಕ್ಕೆ ಕಾರಣವನ್ನು ನೀಡಿಲ್ಲ. ತಾಲೂಕು ಕಾರ್ಯನಿರ್ವಹಣಾಧಿಕಾರಿಯ ಆದೇಶವಿದ್ದರೂ ಸಹಿತ ಕೋಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ. ನಿವೇಶನ ರಹಿತರಿಗೆ ಶೀಘ್ರ ನಿವೇಶನ ಮಂಜೂರು ಮಾಡುವಂತೆ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ದಾಸ್ ಭಂಡಾರಿ, ಸಂಘಟಕರುಗಳಾದ ಮಹಾಬಲ ವಡೇರಹೋಬಳಿ, ನಾಗರತ್ನ, ಗಣಪತಿ ಶೇಟ್ ಮೊದಲಾದವರು ಉಪಸ್ಥಿತರಿದ್ದರು. ಕೋಣಿ ಗ್ರಾ.ಪಂ ನ ವಿರುದ್ದ ಘೋಷಣೆಯನ್ನು ಕೂಗಲಾಯಿತು. ಕುಂದಾಪುರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮನವಿ ಸ್ವೀಕರಿಸುವ ತನಕ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.

Exit mobile version