Kundapra.com ಕುಂದಾಪ್ರ ಡಾಟ್ ಕಾಂ

ಆರ್. ಕೆ. ಸಂಜೀವ ರಾವ್ ಅವರ ಜನ್ಮಶತಾಬ್ದಿ ಆಚರಣೆ, ನುಡಿನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಮ್ಮ ಕುಟುಂಬಕ್ಕಿಂತ ಸಮಾಜದ ಹಿತವನ್ನೇ ಅನುಗಾಲವೂ ಬಯಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜಿಲ್ಲೆಯ ಜನತೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಅವರಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡುತ್ತಾ ಕೇವಲ ಅಲ್ಪಕಾಲ ಬಾಳಿದ ಸಂಜೀವರಾಯರು ಒರ್ವ ವ್ಯಕ್ತಿಯಾಗಿರದೇ ತಮ್ಮ ವ್ಯಕ್ತಿತ್ವದ ಮೂಲಕ ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಕೆ. ಅಪ್ಪಣ್ಣ ಹೆಗ್ಡೆ ಹೇಳಿದರು.

ಖಂಬದಕೋಣೆ ಅಭಿವೃದ್ಧಿ ಹರಿಕಾರ ಆರ್.ಕೆ.ಸಂಜೀವ ರಾವ್ ಅವರ 100ನೇ ಜನ್ಮದಿನ ಪ್ರಯುಕ್ತ ಜನ್ಮಶತಾಬ್ದಿ ಆಚರಣಾ ಸಮಿತಿ, ಗ್ರಾಪಂ ಖಂಬದಕೋಣೆ, ಸಂಜೀವ ರಾವ್ ಸ್ಮಾರಕ ದತ್ತಿನಿಧಿ, ಸಹಿಪ್ರಾ ಶಾಲೆ ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಆರ್‌ಕೆಎಸ್ ಜನ್ಮಶತಾಬ್ದಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಯರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಈ ಭಾಗದ ಕೃಷಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಾಗಿ ನಿಂತು ಅಭಿವೃದ್ಧಿಗೊಳಿಸಿದವರು. ರಾಜಕಿಯೇತರವಾಗಿ ಜನಸೇವೆಗೆ ಇತರರನ್ನು ಉತ್ತೇಜಿಸುತ್ತದ್ದ ಆರ್‌ಕೆಎಸ್, ಗ್ರಾಪಂ ಅಧ್ಯಕ್ಷ ತಾಪಂ ಸದಸ್ಯರಾಗಿಯೂ ಜನ ಗುರುತಿಸುವಂತಹ ಉತ್ತಮ ಕೆಲಸ ಮಾಡಿದವರು ಎಂದ ತಮ್ಮ ಸಹಪಾಠಿಯನ್ನು ಸ್ಮರಿಸಿದರು.

ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವನ್ನು ಪ್ರತಿಪಾದಿಸಿದ ಹೆಗ್ಡೆ, ವಿದ್ಯಾರ್ಥಿಗಳಿಗೆ ಕೇವಲ ಮಧ್ಯಾಹ್ನದ ಊಟ, ಕೆನೆ ಹಾಲು, ಟೈ, ಬೆಲ್ಟ್ ಕೊಟ್ಟರಷ್ಟೇ ಸಾಲದು ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನೆಲೆಯಲ್ಲಿ ಹಾಗೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ತರಗತಿಗೊಂದರಂತೆ ಶಿಕ್ಷಕರನ್ನು ನೇಮಕಗೋಳಿಸಬೇಕು ಎಂದು ಶಾಸಕರ ಮೂಲಕ ಸರಕಾರವನ್ನು ಒತ್ತಾಯಿಸಿದರು.

ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆವಹಿಸಿ, ಆರ್‌ಕೆಎಸ್ ಅವರ ೧೦೦ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿದರು. ಬೆಳಿಗ್ಗೆ ಅಧೀಕೃತವಾಗಿ ಆರ್.ಕೆ.ಸಂಜೀವ ರಾವ್ ರಸ್ತೆ ಎಂದು ಮರುನಾಮಕರಣಗೊಂಡ ಖಂಬದಕೋಣೆ-ಗೋಳಿಹೊಳೆ ರಸ್ತೆಯ ಹೊಸ ನಾಮಫಲಕವನ್ನು ಶಾಸಕರು ಅನಾವರಣಗೊಳಿಸಿದರು. ಸಂಜೀವ ರಾವ್ ಸ್ಮಾರಕ ದತ್ತಿನಿಧಿ ಟ್ರಸ್ಟ್ ದತ್ತುಪಡೆದ ಖಂಬದಕೋಣೆ ಸಹಿಪ್ರಾ ಶಾಲೆಯ ದತ್ತು ಒಡಂಬಡಿಕೆಯ ಪತ್ರಗಳನ್ನು ಮೆನೆಜಿಂಗ್ ಟ್ರಸ್ಟಿ ಕೆ. ಎಸ್. ಪ್ರಕಾಶ್ ರಾವ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಪರಸ್ಪರ ವಿನಿಮಯ ಮಾಡಿಕೊಂಡರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಟ್ರಸ್ಟ್ ಕೊಡಮಾಡಿದ ಗಣಕಯಂತ್ರ ಶಾಲೆಗೆ ಹಸ್ತಾತರಿಸಿದರು. ಗ್ರಾಪಂ ಅಧ್ಯಕ್ಷ ರಾಜೇಶ ದೇವಾಡಿಗ, ಹಿರಿಯರಾದ ಎ. ಅಣ್ಣಪ್ಪ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ ಸೀತಾ, ನಿವೃತ್ತ ವೈದ್ಯಾಧಿಕಾರಿ ಡಾ. ಸುಧಾಕರ ಹೆಗ್ಡೆ, ಶಿಕ್ಷಣ ಸಂಯೋಜಕ ವೆಂಕಪ್ಪ, ಪ್ರಾಶಾಶಿ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸಂದೀಪನ್ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಬಿಜೂರು ವಿಶ್ವೇಶ್ವರ ಅಡಿಗ ಉಪಸ್ಥಿತರಿದ್ದರು.

ಜನ್ಮಶತಾಬ್ದಿ ಆಚರಣಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕ ಗಂಗಾಧರ ಬಂಟ್ ವಂದಿಸಿದರು. ಸಿಆರ್‌ಪಿ ಶ್ರೀಕಾಂತ್ ಕಾಮತ್ ಸಹಕರಿಸಿದರು. ವಿಶ್ವನಾಥ ಶೆಟ್ಟಿ ನಿರೂಪಿಸಿದರು.

Exit mobile version