Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ ಮಕ್ಕಳ ಧ್ವನಿ 2016 ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಂದು ನಮ್ಮ ದೇಶದಲ್ಲಿ ಪರಿಸರದಲ್ಲಿರುವ ಕಸ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಯೋಜನೆ ಜಾರಿಯಲ್ಲಿದೆ. ಹಾಗೆಯೇ ಇಂದು ನಮ್ಮ ಮನ ಮನಸ್ಸಿನಲ್ಲಿರುವ ಅಶುದ್ಧವನ್ನು ಹೋಗಲಾಡಿಸುವುದು ಅಗತ್ಯವಾಗಿದೆ. ಸಾಹಿತ್ಯ ಎಂದರೆ ಒಂದು ಅಕ್ಷರ, ಒಂದು ಪದ, ಒಂದು ವಾಕ್ಯ ಗುಚ್ಛ, ಒಂದು ಪುಸ್ತಕವಲ್ಲ, ಸಾಹಿತ್ಯ ಎಂದರೆ ಅದು ಒಂದು ಶಕ್ತಿ. ಸಾಹಿತ್ಯದ ಮಾಧ್ಯಮವಾದ ಒಂದು ಪುಸ್ತಕದಿಂದ ಒಂದು ಉತ್ತಮ ಮಾನವನ ನಿರ್ಮಾಣ ಸಾಧ್ಯವಿದೆ ಎಂದು ಮೈಸೂರು ಜಯಜಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ತೃಪ್ತಿ ಕೆ.ಆರ್. ಹೇಳಿದರು.

ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮ ಗಾಂಧಿ ಸಭಾಭವನದಲ್ಲಿ ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಸಹಯೋಗದೊಂದಿಗೆ ಕೋಟ ವಿವೇಕ ವಿದ್ಯಾ ಸಂಸ್ಥೆಗಳು, ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ(ರಿ.) ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ೨೩ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ ಮಕ್ಕಳ ಧ್ವನಿ ೨೦೧೬ ಉದ್ಘಾಟಿಸಿ ಮಾತನಾಡಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಶಾಮ ಪ್ರಸಾದ ಎಚ್.ಪಿ. ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಲೂರ ಮಾತನಾಡಿ, ಪ್ರತಿ ಮಗುವಿನ ಆರಂಭಿಕ ಶಿಕ್ಷಣವು ಆ ಮಗುವಿನ ಭದ್ರ ಬುನಾದಿಗೆ ಕಾರಣವಾಗುತ್ತದೆ. ಪ್ರಾರಂಭಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾಲ್ಯಯುತವಾದ ಸತ್ವಯುತವಾದ ವಿಷಯಗಳನ್ನು ಅಳವಡಿಸಿದರೆ ಮಗುವಿನ ಭವಿಷ್ಯಕ್ಕೆ ಅದು ನೆರವಾಗುತ್ತದೆ. ಕೇವಲ ಜಯಂತಿಗಳ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲ ಮಹಾನ್ ವ್ಯಕ್ತಿಗಳ ಆದರ್ಶ ಮಕ್ಕಳಿಗೆ ಪಾಠವಾಗವ ವ್ಯವಸ್ಥೆಯಾಗಬೇಕು ಎಂದರು. ಇದೇ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ೨೦೧೫ರಲ್ಲಿ ಪುಸ್ತಕ ಪ್ರಕಟಿಸಿದ ಪುಟಾಣಿಗಳಿಗೆ ಗೌರವಧನ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಆನಂದ ಸಿ.ಕುಂದರ್, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ವಿಜಯ ಬಲ್ಲಾಳ್, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ.) ಅಧ್ಯಕ್ಷ ಪ್ರೋ ಸಿ.ಉಪೇಂದ್ರ ಸೋಮಯಾಜಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಅರ್ಜುನ್ ಶೆಣೈ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಅಭಿಷೇಕ್ ಪಿ.ವಿ. ಉಪಸ್ಥಿತರಿದ್ದರು.

ದ.ಕ.ಮಕ್ಕಳ ಸಾಹಿತ್ಯ ಸಂಗಮದ ಪ್ರಧಾನ ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್ ಪ್ರಸ್ತಾವಿಸಿದರು. ವಿವೇಕ ಆಂಗ್ಲ ಮಾಧ್ಯಮ ಶಾಲೆಯ ರಿತೇಶ್ ಕುಂದರ್ ಸ್ವಾಗತಿಸಿದರು. ಪಣಂಬೂರು ಎನ್.ಎಮ್.ಪಿ.ಟಿ. ಆಂಗ್ಲಮಾಧ್ಯಮ ಪ್ರೌಢಶಾಲೆಯ ಭೂಮಿಕಾ ಪ್ರಿಯದರ್ಶಿನಿ ಮತ್ತು ನಂತೂರು ಸ್ವಾಮಿ ಸದಾನಂದ ಸರಸ್ವತಿ ಪ್ರೌಢಶಾಲೆಯ ಶಮಂತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕೋಟ ಹಂದೆ ದೇವಸ್ಥಾನದಿಂದ ವಿದ್ಯಾರ್ಥಿಗಳ ಮತ್ತು ಗಣ್ಯರ ಮೆರವಣಿಗೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಭೋಜ ಪೂಜಾರಿ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಮತ್ತು ಕಾರ್ಯಕ್ರಮದ ಸಂಘಟಕರು ಉಪಸ್ಥಿತರಿದ್ದರು.

Exit mobile version