Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಮಧ್ಯ ಮಾರಾಟ ಜಾಲದ ವಿರುದ್ಧ ಕ್ರಮ ಕೈಗೊಳ್ಳಿ: ಗೃಹ ಸಚಿವರಿಗೆ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಹಳ್ಳಿ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆಯ ಸದಸ್ಯೆಯರು ತಾಪಂ ಸದಸ್ಯೆ ಗ್ರೀಷ್ಮಾ ಭಿಡೆ ನೇತೃತ್ವದಲ್ಲಿ ಶುಕ್ರವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಕೊಲ್ಲೂರು ದೇವಳದಲ್ಲಿ ಭೇಟಿಮಾಡಿ ಮನವಿ ಸಲ್ಲಿಸಿದರು.

ಜಡ್ಕಲ್-ಮುದೂರು ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ತಲೆಯೆತ್ತಿರುವ ಅನಧೀಕೃತ ಗೂಡಂಗಡಿ ಹಾಗೂ ಕೆಲವರ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದೆ. ಈ ವಿಷಯ ಗೊತ್ತಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದನ್ನು ನಿಯಂತ್ರಿಸುವ ಹಾಗೂ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವ ಬಗ್ಗೆ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಮಹಿಳೆಯರು ದೂರಿದರು. ಆದಷ್ಟು ಬೇಗ ಅಕ್ರಮ ಮದ್ಯದ ವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಅಲ್ಲಿದ್ದ ಮಾಧ್ಯಮದವರೂ ಕೂಡಾ ಈ ವಿಚಾರವಾಗಿ ಸಚಿವರ ಗಮನ ಸೆಳೆದರು.

ಕರಾವಳಿಯಲ್ಲಿ ಹೆಚ್ಚುತ್ತಿರುವ ಆಕ್ರಮ ಮದ್ಯ ಮಾರಾಟದ ಬಗ್ಗೆ ಮಾಧ್ಯಮದವರು ಹಾಗೂ ಮಹಿಳೆಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅಬಕಾರಿಯಿಂದ ಸರಕಾರಕ್ಕೆ 16-18 ಸಾವಿರ ರಾಜಸ್ವ ಸಿಗುತ್ತದೆ. ಹಾಗಂತ ಆಕ್ರಮ ಮದ್ಯ ಮಾರಾಟ ಮಾಡುವುದು ಖಂಡನೀಯ. ಇದನ್ನು ನಿಯಂತ್ರಿಸಬೇಕಾದ ಹೊಣೆ ಅಬಕಾರಿ ಇಲಾಖೆಯ ಮೇಲಿದೆ. ಇಲಾಖೆಯಲ್ಲಿ ಸ್ಪೆಷಲ್ ಫೋರ್ಸ್‌ಗಳಿದ್ದು, ಅಧಿಕಾರಿಗಳು ಈ ಅವ್ಯವಸ್ಥೆ ಮುಂದುವರಿಯದ ಹಾಗೆ ಸರಿಯಾದ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಆಕ್ರಮ ಮದ್ಯ ಮಾರಾಟದ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಅಥವಾ ದೂರು ಬಂದಲ್ಲಿ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದಷ್ಟೇ ಉತ್ತರಿಸಿ, ಹಾವು ಸಾಯಬಾರದು-ಕೋಲು ಮುರಿಯಬಾರದು ಎಂಬಂತೆ ಜಾಣನಡೆ ಪ್ರದರ್ಶಿಸಿದರು.

ಜಡ್ಕಲ್-ಮುದೂರು ಗ್ರಾಪಂ ಸದಸ್ಯರಾದ ಅಲ್ಫಾಂಸಾ, ಆಶಾ, ಪಿ. ಎಲ್. ಜೋಸ್, ಕೊಲ್ಲೂರು ಗ್ರಾಪಂ ಅಧ್ಯಕ್ಷ ಕೆ. ಎನ್. ವಿಶ್ವನಾಥ ಅಡಿಗ ಮೊದಲಾದವರು ನಿಯೋಗದಲ್ಲಿದ್ದರು.

Exit mobile version