Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿದ್ದು, ಶೀಘ್ರದಲ್ಲಿ ಕುಂದಾಪುರದಲ್ಲಿ ಕೇಂದ್ರ ಕಛೇರಿಯನ್ನು ತೆರೆಯಲಿದ್ದು, ನಾವುಂದ ಹಾಗೂ ಬೈಂದೂರಿನಲ್ಲಿ ಶಾಖಾ ಕಛೇರಿಗಳಾಗಿ ಕಾರ್ಯನಿರ್ವಹಿಸಲಿವೆ. ಸಂಘದ ಅಧೀನದಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡಿ ಪ್ರಧಾನ ಕಛೇರಿ ಸ್ಥಳಾಂತರದಂದು ಉದ್ಘಾಟಿಸಲಾಗುವುದು. ಸದಸ್ಯರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡುವುದರ ಮೂಲಕ ಸ್ವಾವಲಂಬನೆಗೆ ಒತ್ತು ನೀಡಬೇಕಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಿ., ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ಕೊಲ್ಲೂರು ಹೇಳಿದರು.

ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ೯ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ವರದಿ ವರ್ಷದಲ್ಲಿ ೩೬೩೩ ಸದಸ್ಯರನ್ನು ಹೊಂದಿ, ಒಟ್ಟು ರೂ. ೪೯,೫೦,೮೮೦ ಪಾಲುಹಣವನ್ನು ಹೊಂದಿದೆ.ವಿವಿಧ ಠೇವಣಿಗಳಿಂದ ಒಟ್ಟು ರೂ.೪,೭೭,೨೮,೪೨೦.೩೦ ಠೇವಣಾತಿ ಹೊಂದಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಠೇವಣಿ ಸಂಗ್ರಹಣೆಯಲ್ಲಿ ರೂ.೧,೧೯,೨೯,೭೧೨ರಷ್ಟು ಜಾಸ್ತಿಯಾಗಿದ್ದು, ಶೇ.೩೩.೩೨ರಷ್ಟು ವೃದ್ದಿಯಾಗಿದೆ. ೨೦೧೫-೧೬ನೇ ಆಡಿಟ್ ವರ್ಗೀಕರಣದಲ್ಲಿ ಸಂಘವು ’ಎ’ ತರಗತಿಯಲ್ಲಿದೆ ಎಂದರು.

ಸಂಘವು ೧೭೫ ಸದಸ್ಯರನ್ನು ಯಶಸ್ವಿನಿ ವಿಮಾ ಯೋಜನೆಗೆ ನೊಂದಾಯಿಸಿದ್ದು, ಬೈಂದೂರಿನಲ್ಲಿ ಸಂಘಕ್ಕೆ ಸ್ವಂತ ೪ಸೆಂಟ್ಸ್ ನಿವೇಶನವನ್ನು ಖರೀದಿ ಮಾಡಲು ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು. ನಾವುಂದ ಕಛೇರಿಯನ್ನು ಶಾಖಾ ಕಛೇರಿಯನ್ನಾಗಿಸಿ, ಕುಂದಾಪುರದಲ್ಲಿ ಕೇಂದ್ರ ಕಛೇರಿ ಆರಂಭಿಸಲಾಗುವುದು ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಕೆ.ರಮಾನಂದ, ಶಶಿಕಲಾ ನಾರಾಯಣ ಗಾಣಿಗ ಕುಂದಾಪುರ, ಮಂಜುನಾಥ ಗಾಣಿಗ ಗಂಗೊಳ್ಳಿ, ನವೀನ ಎನ್.ಗಾಣಿಗ ನಾವುಂದ, ಬಿ.ಎಂ.ನಾಗರಾಜ ಗಾಣಿಗ ಬೈಂದೂರು, ಶ್ರೀಮತಿ ಜಾನಕಿ ಗಾಣಿಗ ಶಿರೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಪ್ರಧಾನ ವ್ಯವಸ್ಥಾಪಕ ನಾಗರಾಜ ಗಾಣಿಗ ಹಿಲ್ಕೋಡು ಸಂಘದ ವಾರ್ಷಿಕ ವರದಿ, ಅಯವ್ಯಯ ಮಂಡಿಸಿದರು. ಸಂಘದ ಸಿಬ್ಬಂದಿ ಸತ್ಯನಾರಾಯಣ ಪ್ರಾರ್ಥಿಸಿ, ಸಂಘದ ನಿರ್ದೇಶಕರಾದ ರಮಾನಂದ ಸ್ವಾಗತಿಸಿ, ನಾಗರಾಜ ಗಾಣಿಗ ಬೈಂದೂರು ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version