Kundapra.com ಕುಂದಾಪ್ರ ಡಾಟ್ ಕಾಂ

ಮನುಷ್ಯತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿದ ರಾಷ್ಟ್ರೀಯತೆಯೂ ಇಲ್ಲ: ವರದೇಶ ಹಿರೇಗಂಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಂದು ಧರ್ಮದ ಪರವಾಗಿರುವ ರಾಷ್ಟ್ರವಾದ ಎಂದಿಗೂ ರಾಷ್ಟ್ರೀಯತೆಯಾಗದು. ಎಲ್ಲಾ ಧರ್ಮ, ಭಾಷೆ, ಪಂಗಡವನ್ನೊಳಗೊಂಡ ಸಂವಿಧಾನ ಮಾತ್ರ ಭಾರತದ ಶ್ರೇಷ್ಠ ಗ್ರಂಥ. ಎಲ್ಲರನ್ನೂ ಸಮಾನರಾಗಿ, ಗೌರವದಿಂದ ಕಾಣುವ, ಎಲ್ಲವನ್ನೂ ಒಳಗೊಂಡ ಸಂವಿಧಾನದ ಮೂಲ ತತ್ವವೇ ರಾಷ್ಟ್ರೀಯತೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ಹೇಳಿದರು.

ಸಮುದಾಯ ಕುಂದಾಪುರ ಇಲ್ಲಿನ ನೇತಾಜಿ ಸಭಾಭವನದಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯತೆ – ಒಂದು ಮಾತುಕತೆ’ ಸಮುದಾಯ ಸಮೂಹ ಅಧ್ಯಯನದ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು.

ಭಾತರದ ಮಟ್ಟಿಗೆ ರಾಷ್ಟ್ರೀಯತೆ ಎನ್ನುವುದು ಆಧುನಿಕ ಸೃಷ್ಠಿ. ಇಲ್ಲಿ ವಿವಿಧ ಬಗೆಯ ರಾಷ್ಟ್ರೀಯತೆಯನ್ನು ಕಾಣಬಹುದಾದರೂ ಸಂವಿಧಾನವೇ ಪರಮೋಚ್ಚವಾದದ್ದು. ಇದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ದೇಶದ ಪ್ರಜೆಯೊಬ್ಬ ತನಗೆ ಬಡತನದಿಂದ, ಕೋಮುವಾದದಿಂದ, ಜಾತೀಯತೆಯಿಂದ ಮುಕ್ತಿಬೇಕು ಎಂದು ಹೇಳಿದರೆ, ನೆರೆಯ ರಾಷ್ಟ್ರವನ್ನು ಹೊಗಳಿದರೇ ಅದು ರಾಷ್ಟ್ರವಿರೋಧಿ ಎನ್ನಲಾಗದು. ಗಡಿಯ ರೇಖೆಗಳು ನಮ್ಮ ಸೃಷ್ಠಿ. ಮನುಷತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿತ ರಾಷ್ಟ್ರೀಯತೆಯೂ ಇಲ್ಲ ಎಂದವರು ತಮ್ಮ ಮಾತಿನುದ್ದಕ್ಕೂ ಪ್ರತಿಪಾದಿಸಿದರು.

ಭಂಡಾರ್‌ಕಾರ‍್ಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಎಸ್. ಹಯವದನ ಉಪಾಧ್ಯ ಮಾತನಾಡಿ ಭಾರತವು ಬಹುರಾಷ್ಟ್ರೀಯತೆಗಳುಳ್ಳ ದೇಶವಾಗಿದ್ದು ಎಲ್ಲವನ್ನೂ ಗೌರವಿಸುವ ಕೆಲಸವಾಗಬೇಕಿದೆ. ಈ ಭೂಮಿ ನಮಗೆ ಸೇರಿದ್ದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಇದು ಎಲ್ಲರಿಗೂ ಸೇರಿದ್ದು ಎಂಬುದನ್ನು ಗಮನಿಸಿಬೇಕು.

ರಾಷ್ಟ್ರೀಯತೆ ಎನ್ನುವುದು ಸಾವಿರಾರು ವರ್ಷಗಳಿಂದ ಬಂದದ್ದು ಎನ್ನುವುದು ತಪ್ಪು ಕಲ್ಪನೆಯಷ್ಟೇ. ಭಾವುಟವನ್ನು ಹಿಡಿದು ಭಾವುಕತೆಯನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುವುದು ರಾಷ್ಟವಾದವಾಗಲಾರದು. ಇಷ್ಟು ವರ್ಷದ ಬಳಿಕವೂ ಎಲ್ಲರಿಗೂ ಸಮನಾಗಿ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸ್ವಾತಂತ್ರ್ಯ ದೊರೆತಿದೆಯೇ ಎಂಬುದರ ಬಗ್ಗೆ ಆಲೋಚಿಸಬೇಕಿದೆ ಎಂದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್, ಕಾರ್ಯದರ್ಶಿ ಸದಾನಂದ ಬೈಂದೂರು ವೇದಿಕೆಯಲ್ಲಿದ್ದರು. ಪ್ರೇಕ್ಷಕರೊಂದಿಗೆ ಸಂವಾದ ಜರುಗಿತು.

Exit mobile version