Kundapra.com ಕುಂದಾಪ್ರ ಡಾಟ್ ಕಾಂ

ಭಾರತ್ ಬಂದ್: ಕುಂದಾಪುರ ಸ್ತಬ್ಧ, ಬೈಂದೂರಿನಲ್ಲಿ ಮಿಶ್ರ ಪ್ರತಿಕ್ರಿಯೆ. ಪ್ರಯಾಣಿಕರ ಪರದಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ದೇಶಾದ್ಯಂತ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕುಂದಾಪುರ ತಾಲೂಕಿನಲ್ಲಿಯೂ ಬಂದ್ ಬಹುಪಾಲು ಯಶಸ್ವಿಯಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ 11 ವಿವಿಧ ಕಾರ್ಮಿಕ ಸಂಘಟನೆಗಳು 17 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್‌ಗೆ ಕರೆನೀಡಿದ್ದು, ಬೆಳಿಗ್ಗಿನಿಂದಲೇ ಮುಷ್ಕರಕ್ಕೆ ಪೂರಕ ವಾತಾವರಣ ಉಂಟಾಗಿದ್ದು, ಪ್ರಯಾಣಿಕರು ಮಾತ್ರ ಪರದಾಡುವಂತಾಯಿತು.

ಬಸ್ಸು, ಆಟೋವಿಲ್ಲ:
ಮುಷ್ಕರಕ್ಕೆ ಖಾಸಗಿ ಬಸ್, ಟೆಂಪೊ ಮಾಲಿಕ ಚಾಲಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಬೆಳಿಗ್ಗಿನಿಂದ ಯಾವುದೇ ಬಸ್ಸುಗಳು ಬಿದಿಗಿಳಿಯಲಿಲ್ಲ. ಕುಂದಾಪುರ ನಗರ ಭಾಗದಲ್ಲಿ ಆಟೋ ಚಾಲಕರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಆಟೋ ಸಂಚಾರವೂ ಇರಲಿಲ್ಲ. ಬೈಂದೂರು ಭಾಗಗಳಲ್ಲಿ ಆಟೋ ಸಂಚಾರವಿತ್ತು. ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು, ವಿರಳ ಸಂಖ್ಯೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದುದು ಕಂಡುಬಂತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಬಸ್ಸುಗಳ ಸಂಚಾರ ವಿರಳವಾಗಿತ್ತಾದರೂ ಅಲ್ಲಲ್ಲಿ ಪ್ರತಿಭಟನಾಕಾರರು ಬಸ್ಸುಗಳನ್ನು ತಡೆಹಿಡಿಯುವ ದೃಶ್ಯ ಸಾಮಾನ್ಯವಾಗಿತ್ತು. ತಲ್ಲೂರು ಬಳಿ ಕಿಡಿಗೇಡಿಗಳೂ ಸರಕಾರಿ ಬಸ್‌ಗೆ ಕಲ್ಲು ತೂರಿ ಘಟನೆಯೂ ನಡೆದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಅಂಗಡಿ, ಬ್ಯಾಂಕ್ ಬಂದ್:
ತಾಲೂಕಿನ ಬಹುಪಾಲು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಬೆಳಿಗ್ಗಿನಿಂದಲೇ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ಇನ್ನಿತರ ಕಛೇರಿಗಳನ್ನು ತೆರೆದಿರಲಿಲ್ಲ. ಬ್ಯಾಂಕ್ ನೌಕರರೂ ಕೂಡ ಬಂದ್‌ಗೆ ಬೆಂಬಲ ಸೂಚಿಸಿ ಅರ್ಧ ಬಾಗಿಲು ಹಾಕಿರುವುದು ಕೆಲವೆಡೆ ಕಂಡುಬಂದರೆ ಹಲವೆಡೆ ಸಂಪೂರ್ಣ ಮುಚ್ಚಲಾಗಿತ್ತು. ಸರಕಾರಿ ಕಛೇರಿಗಳು ತೆರೆದಿದ್ದರೂ ಜನಸಂದಣಿ ವಿರಳವಾಗಿತ್ತು.

ಜನರ ಪರದಾಟ:
ಹಲವೆಡೆ ಬಸ್ ಸಂಚಾರವಿಲ್ಲದೆ ದೂರದ ಊರುಗಳಿಗೆ ತೆರಳಬೇಕಿದ್ದ ಜನರು ಪರದಾಡಬೇಕಾದ ಸ್ಥಿತಿ ಉಂಟಾಯಿತು. ಕುಂದಾಪುರ ಶಾಸ್ತ್ರೀವೃತ್ತ, ಸರಕಾರಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬಸ್ಸಿಗಾಗಿ ಕಾಯುವುದು ಸಾಮಾನ್ಯವಾಗಿತ್ತು. ಕುಂದಾಪುರದಲ್ಲಿ ಆಟೋ ಸಂಚಾರವೂ ಇಲ್ಲದ್ದರಿಂದ ಖಾಸಗಿ ಆಸುಪಾಸಿನವರು ಖಾಸಗಿ ಹಾಗೂ ದ್ವಿಚಕ್ರ ವಾಹನಗಳನ್ನು ಅವಲಂಭಿಸಬೇಕಾದ ಸ್ಥಿತಿ ಎದುರಾಯಿತು.

ರಾಷ್ಟ್ರಿಯ ಹೆದ್ದಾರಿ ತಡೆ, ಪ್ರತಿಭಟನೆ:
ಮುಷ್ಕರಕ್ಕೆ ಕರೆನೀಡಿದ್ದ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಮೆರವಣಿಗೆಯಲ್ಲಿ ಸಾಗಿಬಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು. ಕುಂದಾಪುರ ಶಾಸ್ತ್ರೀವೃತ್ತ, ಹೆಮ್ಮಾಡಿ ಪೇಟೆ ಹಾಗೂ ಬೈಂದೂರು ಬೈಪಾಸ್ ಬಳಿ ಹೆದ್ದಾರಿ ತಡೆ ನಡೆಸಿ, ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಾರ್ಮಿಕ ವಿರೋಧಿ ಕಾನೂನನ್ನು ನಿಲ್ಲಸಬೇಕು, ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ, ಕೆಲಸ ಖಾಯಂಗೊಳಿಸುವಿಕೆ ಮುಂದಾದವುಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರತಿಭಟನೆಗೆ ವಾಹನ ಚಾಲಕ ಮಾಲಕರು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆರು, ಪಂಚಾಯತ್ ನೌಕರರು, ಬ್ಯಾಂಕ್ ಟೆಲಿಕಾಂ ನೌಕರರು, ಐಎನ್‌ಟಿಯುಸಿ, ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳೂ ಬೆಂಬಲ ಸೂಚಿಸಿದ್ದವು.

ಬೈಂದೂರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ವೆಂಕಟೇಶ್ ಕೋಣಿ, ಗಣೇಶ್ ತೊಂಡೆಮಕ್ಕಿ ಮೊದಲಾದವರು ವಹಿಸಿದ್ದರೇ, ಕುಂದಾಪುರದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಹೆಚ್. ನರಸಿಂಹ, ಸುರೇಶ್ ಕಲ್ಲಾಗರ್, ಲಕ್ಷಣ ಶೆಟ್ಟಿ, ರಾಮಚಂದ್ರ ನಾವಡ ಮೊದಲಾದವರು ವಹಿಸಿದ್ದರು.

ಬಿಗಿ ಬಂದೋವಸ್ತ್:
ತಾಲೂಕಿನಾದ್ಯಂತ ನಡೆದ ಮುಷ್ಕರಕ್ಕೆ ಬಿಗಿ ಪೊಲೀಸ್ ಬಂದೂವಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ಪ್ರವೀಣ್ ನಾಯಕ್ ನೇತೃತ್ವದಲ್ಲಿ ಅಹಿತಕರ ಘಟನೆಗಳ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version