Kundapra.com ಕುಂದಾಪ್ರ ಡಾಟ್ ಕಾಂ

ಚಿತ್ತೂರು: ಗ್ರಾಮ ಅಭ್ಯುದಯ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಸಹಭಾಗಿತ್ವದ ಯೋಜನೆಯನ್ನು ರೂಪಿಸಿದಲ್ಲಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಡಿವಾಳ ಸಂದೇಶ್ ಹೇಳಿದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ “ಗ್ರಾಮ ಅಭ್ಯುದಯ ಅಭಿಯಾನ”ದ ಉದ್ಘಾಟಿಸಿ ಮಾತನಾಡಿದರು.

ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಚಿತ್ತೂರು ಗ್ರಾಮ ಪಂಚಾಯತ್ ಪಿ.ಡಿ.ಓ. ಸಂದೇಶ್ ಶೆಟ್ಟಿ, ಪ್ರತಿಯೊಬ್ಬನೂ ತನ್ನ ಸಾಮಾಜಿಕ ಜವಾಬ್ದಾರಿಯನ್ನರಿತು ಕಾರ್ಯಪ್ರವತ್ತನಾದರೆ, ದೇಶದ ಸರ್ವಾಂಗೀಣ ಅಭಿವ್ರದ್ಧಿ ಸಾಧ್ಯ ಎಂದರು. ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದರೆ, ಸಂಪನ್ಮೂಲಗಳ ಸದ್ಬಳಕೆಯಿಂದ ಸರಕಾರದ ಸೌಲಭ್ಯಗಳು ಸರಿಯಾಗಿ ಜನರಿಗೆ ತಲುಪಿ, ತನ್ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳುವುದು, ಸ್ವಚ್ಛ ಭಾರತ್ ಫ್ರೆಂಡ್ಸ್ ನವರು ಚಿತ್ತೂರು ಗ್ರಾಮವನ್ನು ಆಯ್ಕೆ ಮಾಡಿ ಮುಂದಿನ ಮೂರು ತಿಂಗಳುಗಳ ಕಾಲ ವಿವಿಧ ಕಾರ್ಯಕ್ರಮವನ್ನು ಮಾಡಲಿದ್ದು ಅವರಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.

ಚಿತ್ತೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಸೀತಾರಾಮ್, ಆರೋಗ್ಯವಂತ ಸಮಾಜ ನಿರ್ಮಾಣವಾದರೆ, ದೇಶದ ಸಂಪನ್ಮೂಲ ವ್ರದ್ಧಿಯಾಗಿ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು ಎಂದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ನಾಯಕ್ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಚ್ಛ ಭಾರತ್ ಫ್ರೆಂಡ್ಸ್ ನಡೆದು ಬಂದ ದಾರಿ ಮತ್ತು ಗ್ರಾಮ ಅಭ್ಯುದಯ ಅಭಿಯಾನದ ಬಗ್ಗೆ ಮಾಹಿತಿ ಕೊಟ್ಟರು. ಸ್ವಚ್ಛ ಭಾರತ್ ಫ್ರೆಂಡ್ಸ್ ಕುಂದಾಪುರ ವಲಯ ಸಂಚಾಲಕ ರಕ್ಷಿತ್ ಕುಮಾರ್ ವಂಡ್ಸೆ, ಸದಸ್ಯ ರಜಾಕ್ ಉಪಸ್ಥಿತರಿದ್ದರು.

Exit mobile version