Kundapra.com ಕುಂದಾಪ್ರ ಡಾಟ್ ಕಾಂ

ಮಯ್ಯಾಡಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿದೆ. ಈ ನೆಲೆಯಲ್ಲಿ ಇದು ಕೇವಲ ಭಾಷಣಕ್ಕೆ ಸೀಮಿತವಾದ ವೇದಿಕೆಯಾಗದೇ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವಲ್ಲಿ ಪರಿಪೂರ್ಣತೆ ಕಾಣಬೇಕು ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು.

ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೇ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು, ಆದರೆ ಈಗ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಅವಕಾಶಗಳು ದೊರಕುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಪಂ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಶುಭಹಾರೈಸಿದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯೆ ಮಾಲಿನಿ ಕೆ., ಗ್ರಾಪಂ ಸದಸ್ಯ ಭಾಸ್ಕರ್ ನಾಯ್ಕ್, ಹಿರಿಯರಾದ ಎ. ಅಣ್ಣಪ್ಪ ಶೆಟ್ಟಿ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ನಾಗರಾಜ ಪುತ್ರನ್, ಡಯಟ್ ಪ್ರಾಂಶುಪಾಲ ಶೇಖರ್, ಕ್ಷೇತ್ರ ಸಮನ್ವಯಾಧಿಕಾರಿ ರಾಮರಾಯ, ಉತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ವಿಘ್ನೇಶ್ವರ ಮದ್ದೋಡಿ, ಶಿಕ್ಷಣ ಸಂಯೋಜಕ ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಮುಖ್ಯೋಪಾಧ್ಯಾಯ ಜಿ. ಹನುಮಂತ ವಂದಿಸಿದರು. ಸುಬ್ರಹ್ಮಣ್ಯ ಗಾಣಿಗ ಮತ್ತು ರಾಘವೇಂದ್ರ ದಡ್ಡು ನಿರೂಪಿಸಿದರು.

Exit mobile version