Kundapra.com ಕುಂದಾಪ್ರ ಡಾಟ್ ಕಾಂ

ನಿರ್ಮಾಣ ಹಂತದ ಸೇತುವೆಗೆ ಬಸ್‌ ಢಿಕ್ಕಿ: ಓರ್ವ ಗಂಭೀರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮರವಂತೆ ಬಳಿ ನಿಯಂತ್ರಣ ಚಾಲಕನ ತಪ್ಪಿದ ಸರಕಾರಿ ಬಸ್ಸೊಂದು ಚತುಷ್ಪಥ ಕಾಮಗಾರಿಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಢಿಕ್ಕಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಚಾಲಕರಿಬ್ಬರುಸಹಿತ ಎಂಟು ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಬಸ್ಸಿನ ಪ್ರಯಾಣಿಕ ಗದಗ ಜಿಲ್ಲೆಯ ಕಳಸ ಎಂಬಲ್ಲಿಯ ನಿವಾಸಿ ವೀರೇಶ್‌(28) ಎಂದು ಗುರುತಿಸಲಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಚಾಲಕ ಹಾಗೂ ಕಂಡಕ್ಟರ್‌ ಗದಗ ಜಿಲ್ಲೆಯ ಕೋಟಂಗುಚ್ಚಿ ನಿವಾಸಿ ಜೀವನ್‌ ಸಾಬ್‌(41), ಮತ್ತೋರ್ವ ಚಾಲಕ ಬಾದಾಮಿ ಮೂಲದ ಈಶ್ವರ(38), ಪ್ರಯಾಣಿಕರಾದ ಶಿರಹಟ್ಟಿ ತಾಲೂಕಿನ ಮೊಗೇರಿಹೊನೆ ನಿವಾಸಿ ಬಸವರಾಜ್‌(24), ಎಲ್ಲಪ್ಪ ಶಿರಹಟ್ಟಿ (30), ಗದಗ ಜಿಲ್ಲೆಯ ಯಲ್ಲಪ್ಪ (66) , ಗದಗ ಜಿಲ್ಲೆಯ ಮಹಾದೇವಪ್ಪ ಹಳಗೇರಿ (26), ಹಾವೇರಿ ಜಿಲ್ಲೆಯ ರಾಜಪ್ಪ ಬಾಬಣ್ಣ (23), ಧಾರವಾಡದ ಬಸಪ್ಪ ರಾಮಣ್ಣ (53)ಗಾಯಾಳುಗಳು. ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗದಗದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ಬೈಂದೂರು ತನಕ ಚಾಲಕ ಈಶ್ವರ್‌ ಚಲಾಯಿಸಿದ್ದು, ನಂತರ ಅಲ್ಲಿ ಚಾ ಕುಡಿದ ನಂತರ ಕಂಡಕ್ಟರ್‌ ಜೀವನ್‌ ಸಾಬ್‌ ಬಸ್ಸನ್ನು ಚಲಾಯಿಸುತ್ತಿದ್ದರು. ಬಸ್ಸು ಮರವಂತೆ ಹಾಗೂ ತ್ರಾಸಿ ನಡುವಿನ ಬೀಚ್‌ ರಸ್ತೆಯಲ್ಲಿ ಸಾಗುತ್ತಿದ್ದಾಗ ಲಾರಿಯನ್ನು ಓವರ್‌ಟೇಕ್‌ ಮಾಡುವ ಹಂತದಲ್ಲಿ ಮುಂದಕ್ಕೆ ಚಲಿಸಿ ನಿಯಂತ್ರಣ ಕಳೆದುಕೊಂಡು ತೀರಾ ಎಡಕ್ಕೆ ಚಲಿಸಿದ ಪರಿಣಾಮ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಮುವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು ಕೆಲವರು ಸಣ್ಣಪುಟ್ಟ ಗಾಯಗೊಂಡಿದೆ.

ತಪ್ಪಿದ ಭಾರೀ ಅನಾಹುತ: ಬಸ್ಸು ನಿಯಂತ್ರಣ ತಪ್ಪಿ ಸೇತುವೆಗೆ ಇನ್ನಷ್ಟು ವೇಗವಾಗಿ ಢಿಕ್ಕಿಹೊಡೆದಿದ್ದರೆ ಇನ್ನಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅಲ್ಲದೇ ಈ ಸ್ಥಳದಲ್ಲಿ ಮೊದಲಿದ್ದಂತೆ ಸೇತುವೆ ನಿರ್ಮಾಣವಾಗದೇ ಇಲ್ಲವಾದಲ್ಲಿ ಬಸ್ಸು ಸೌಪರ್ಣಿಕ ನದಿಗೆ ಉರುಳುವ ಸಾಧ್ಯತೆ ಇತ್ತು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಗಂಗೊಳ್ಳಿಯ ಅಂಬುಲೆನ್ಸ್‌ ಸ್ಥಳಕ್ಕೆ ಆಗಮಿಸಿದ್ದು ಗಾಯಾಳುಗಳನ್ನು ಸಾಗಿಸುವಲ್ಲಿ ಸಹಕರಿಸಿತು. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version