Kundapra.com ಕುಂದಾಪ್ರ ಡಾಟ್ ಕಾಂ

ಉಪನ್ಯಾಸಕ, ಕುಂದಗನ್ನಡದ ಮೋಡಿಯ ಮಾತುಗಾರ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಇನ್ನಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪನ್ಯಾಸಕ, ಕುಂದಗನ್ನಡದ ಮೇರು ಪ್ರತಿಭೆ, ಸುಲಲಿತ ಮಾತುಗಾರ ತೆಕ್ಕಟ್ಟೆ ಸುರೇಂದ್ರ ಶೆಟ್ಟಿ (52) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

ತೆಕ್ಕಟ್ಟೆ ಪಟೇಲರ ಮನೆಯವರಾದ ಸುರೇಂದ್ರ ಶೆಟ್ಟಿ, ಬಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಇಲಿಜ್ವರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಕ್ರೀಯಾಶೀಲ ವ್ಯಕ್ತಿತ್ವದ, ಚುರುಕಿನ ಮಾತುಗಾರ ಸುರೇಂದ್ರ ಶೆಟ್ಟಿ ಅವರು ಕುಂದಾಪ್ರ ಕನ್ನಡದ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. ಮಾನಿನಿ ರಂಗಸ್ಥಳ, ಗಣಪದನ ಪದ ಕೃತಿಗಳು, ನಾಟಕ ಹಾಗೂ ಕವನ ಸಂಕಲನಗಳನ್ನು ಹೊರತಂದಿದ್ದ ಅವರು, ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದರು. ಗಮಕಿಯಾಗಿ, ಉತ್ತಮ ವಾಗ್ಮಿಯಾಗಿ, ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪ್ರ ಕನ್ನಡದ ಬಗೆಗೆ ವಿಶೇಷ ಒಲವು ಹೊಂದಿದ್ದ ಸುರೇಂದ್ರ ಶೆಟ್ಟರು ಬದುಕಿನುದ್ದಕ್ಕೂ ಕುಂದಗನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತಾಗಿ ಅಧ್ಯಯನ ನಡೆಸುತ್ತಲೇ ಬಂದವರು. ಕುಂದಾಪ್ರ ಕನ್ನಡ ಎಂದಾಗಲೆಲ್ಲಾ ನೆನಪಾಗುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಓರ್ವರೆನಿಸಿಕೊಂಡಿದ್ದರು. ಸುರೇಂದ್ರ ಶೆಟ್ಟಿ ಅವರ ಅಗಲಿಕೆ ಕುಂದಾಪ್ರ ಕನ್ನಡ ಭಾಷಾ ಸಾಹಿತ್ಯಕ್ಕೆ ತುಂಬಲಾದರ ನಷ್ಟವೇ ಸರಿ./ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version