ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೂತನ ಸಂರ್ಕೀಣ, ಸಭಾಂಗಣ, ಗ್ರಂಥಾಲಯ ಉದ್ಘಾಟನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣದಿಂದ ವಿಚಾರ ಶ್ರೀಮಂತಿಕೆಯ ದಾರಿಯತ್ತ ತೆರಳಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ವಿದ್ಯಾ ಸಂಸ್ಥೆಯ ಸಾಧನೆ ಸ್ತುತ್ಯಾರ್ಹ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮುದಾಯ ಕೇಂದ್ರಿತ ಶಿಕ್ಷಣ ನೀಡುವುದರ ಮೂಲಕ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ. ಬೈರಪ್ಪ ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸೌಕೂರು ಶೇರ್ವೆಗಾರ ಮನೆ ವಿಶಾಲಾಕ್ಷಿ ಬಿ. ಹೆಗ್ಡೆ ನೂತನ ಸಂಕೀರ್ಣ, ನೂತನ ಸಭಾಂಗಣ, ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತರಬೇತುಗೊಳಿಸುವ ಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯೆ ವಿನತಾ ಪಿ. ರೈ ನೂತನ ಗಣಕ-ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಶೈಕ್ಷಣಿಕ ವರ್ಷ ೨೦೧೫-೧೬ನೇ ಸಾಲಿನ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ವನ್ನು ಕೆನರಾ ಬ್ಯಾಂಕ್ ಮಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಕೆ. ವಿರೂಪಾಕ್ಷ ಅನಾವರಣ ಗೊಳಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ದುರ್ಮರಣ ಹೊಂದಿದ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿಯವರ ಕುಟುಂಬದವರಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿಯವರು ಸಹಾಯಧನದ ಚೆಕ್ ನೀಡಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ, ಗವರ‍್ನಿಂಗ್ ಕೌನ್ಸಿಲ್ ಸದಸ್ಯ ಅನಿಲ್ ಚಾತ್ರ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜು ವಾರ್ಷಿಕ ಸಂಚಿಕೆ – ‘ಶಿಖರ’ ದ ನಿರ್ವಾಹಕ ಸಂಪಾದಕ ಚೇತನ್ ಶೆಟ್ಟಿ ಕೋವಾಡಿ, ಸಂಚಿಕೆಯ ಕುರಿತು ಮಾತನಾಡಿದರು. ವಿದ್ಯಾರ್ಥಿ ಸಂಪಾದಕ ಮಂಡಳಿಯ ಪ್ರತಿನಿಧಿ ಶಿವಪ್ರಸಾದ್ ಆಚಾರ್ ಅನಿಸಿಕೆ ಹೇಳಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅವಿತಾ ಕೊರೆಯಾ, ನಂದಾ ರೈ, ಪ್ರೀತಿ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ಉಪನ್ಯಾಸಕ ವಿಘ್ನೇಶ್ವರ್ ರಾವ್ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಸ್ಫೂರ್ತಿ ಎಸ್. ಫೆರ್ನಾಂಡಿಸ್ ವಂದಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಅನಿತಾ ಅಲೈಸ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.