Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ದೇವಸ್ಥಾನ ಹಾಗೂ 2 ಅಂಗಡಿಗಳಿಗೆ ಕನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಆಸೋಡು ಶ್ರೀ ನಂದಿಕೇಶ್ವರ ದೇವಸ್ಥಾನ, ಆನಗಳ್ಳಿ ಇಲೆಕ್ಟ್ರಿಶಿಯನ್ ಅಂಗಡಿ ಹಾಗೂ ಬಸ್ರೂರು ಮಾರ್ಗದಲ್ಲಿನ ಮೊಬೈಲ್ ಅಂಗಡಿಗೆ ಕನ್ನ ಹಾಕಿರುವ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಆಸೋಡು ಬೆಳ್ಳಿಕಾನ್ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ದೇವರ ಬೆಳ್ಳಿಯ ಪ್ರಭಾವಳಿ, ಬಾಗಿಲಿನ ಬೆಳ್ಳಿಯ ಕವಚ, ದೇವಳದ ಹೊರಬಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದಿದ್ದಾರೆ.

ಆನಗಳ್ಳಿ ಶ್ರೀ ಮಾತಾ ಇಲೆಕ್ಟ್ರಿಕಲ್ಸ್ ಅಂಗಡಿಗೆ ಶಟರ್ ಮುರಿದು ನುಗ್ಗಿರುವ ಕಳ್ಳರು ಫ್ಯಾನ್, ಸ್ವಿಚ್ ಸೇರಿದಂತೆ ಸುಮಾರು 35,000ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಬಸ್ರೂರು ಬಿ.ಹೆಚ್ ರಸ್ತೆಯ ಎಸ್.ಎಸ್. ಫ್ಯಾನ್ಸಿ ಮೊಬೈಲ್ ಅಂಗಡಿಯ ಶಟರ್ ಮುರಿದು ನುಗ್ಗಿರುವ ಕಳ್ಳರು ಏಳು ಮೊಬೈಲ್ ಪೋನ್ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್, ಅಪರಾಧ ವಿಭಾಗದ ಎಸೈ ದೇವರಾಜ್ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ. ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version