Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ವಾತಾವರಣ ನಿರ್ಮಾಣ: ಶಾಸಕ ಗೋಪಾಲ ಪೂಜಾರಿ

ಬೈಂದೂರು ಪ್ರಥಮ ದರ್ಜೆ ಕಾಲೇಜು ವಿಜ್ಞಾನ ವಿಭಾಗ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:  ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಕರ್ಯ ಒದಗಿಸಿ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ನಮ್ಮ ಗುರಿಯಾಗಿದ್ದು, ಆ ನೆಲೆಯಲ್ಲಿ ಕಾರ್ಯೋನ್ಮಖರಾಗಿ ಬೈಂದೂರು ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಿ ಅಗತ್ಯ ಸೌಕರ್ಯ ಒದಗಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳೂ ಕುಂದಾಪುರ ಅಥವಾ ಭಟ್ಕಳಕ್ಕೆ ತೆರಳುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಹೊರೆಯಾಗುವುದನ್ನು ಮನಗಂಡು ಬೈಂದೂರು ಕಾಲೇಜಿನಲ್ಲಿ ವಿಜ್ಞಾನ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಿವಿಧ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿ ಸದ್ಯ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ವಿಷಯಗಳನ್ನು ಕಲಿಸಲಾಗುವುದು. ಮುಂದಿನ ವರ್ಷ ಅನ್ಯ ವಿಷಯಗಳ ಬೋಧನೆಯನ್ನೂ ಇಲ್ಲಿ ಆರಂಭಿಸಲಾಗುವುದು. ವಿಜ್ಞಾನ ವಿಷಯ ಬೋಧನೆಗೆ ಈಗಾಗಲೇ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಯೋಗಾಲಯಗಳನ್ನು ಸಜ್ಜುಗೊಳಿಸಲಾಗಿದೆ. ಕಾಲೇಜಿಗೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಪ್ರಾಂಶುಪಾಲ ಬಿ. ಎ. ಮೇಳಿ ಸ್ವಾಗತಿಸಿ, ವಂದಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಂಕರ ಪೂಜಾರಿ, ಎಸ್. ರಾಜು ಪೂಜಾರಿ, ಬಿ. ಜನಾರ್ದನ, ಟಿ. ರಘುರಾಮ ಶೆಟ್ಟಿ, ಎಸ್. ಜನಾರ್ದನ, ಸತ್ಯಪ್ರಸನ್ನ, ಸುರೇಶ ಹೋಬಳಿದಾರ್, ಕೆ. ವಿ. ಸತೀಶ್, ರಾಜು ಮೊಗವೀರ, ಕುಮಾರ ಮರಾಠಿ, ಪ್ರಧ್ಯಾಪಕರಾದ ಅನಿಲ್‌ಕುಮಾರ ಶೆಟ್ಟಿ, ಡಾ. ಉಮೇಶ ಮಯ್ಯ, ಪಾಂಡುರಂಗ, ಸುಬ್ರಹ್ಮಣ್ಯ, ಅಮಿತಾ, ವಿಘ್ನೇಶ್ವರ ಮತ್ತಿತರರು, ಬೋಧಕೇತರರು ಇದ್ದರು.

Exit mobile version