Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಸ್ತೆಯಲ್ಲೇ ಹಲ್ಲೆ ನಡೆಸಿ ದರೋಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಸ್ತೆಗೆ ಕಲ್ಲನ್ನು ಅಡ್ಡವಿಟ್ಟು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಹಲ್ಲೆನಡೆಸಿ ದರೋಡೆಗೈದ ಪ್ರಕರಣ ಕುಂದಾಪುರ ಸಂಗಮ್ ಬಳಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಆನಗಳ್ಳಿಯ ನಿವಾಸಿ ಸುಧೀರ್ ಆಚಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಂದಾಪುರದ ಕ್ಲಾಸಿಕ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಧೀರ್, ರಾತ್ರಿ ಅಂಗಡಿ ಮುಚ್ಚಿ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ಸಂಗಮ್ ಬಳಿ ರಸ್ತೆಗೆ ಅಡ್ಡಲಾಗಿ ಕಲ್ಲನ್ನಿಡಲಾಗಿತ್ತು. ಕಾರು ನಿಲ್ಲಿಸಿದಾಗ ಗುಂಪೊಂದು ಅವರನ್ನು ಹೊರಗೆಳೆದು ಹಲ್ಲೆಗೈದಿರುವುದಲ್ಲದೇ ಅವರನ್ನು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಜೆಬಿನಲ್ಲಿದ್ದ 26,000 ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಗಲಾಟೆಯನ್ನು ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಹಲ್ಲೆಗೊಳಗಾಗಿದ್ದ ಸುಧೀರ್ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದ್ದು, ಸುಧೀರ್ ಅವರ ಚಲನವಲನಗಳನ್ನು ಗಮನಿಸಿ ಗುಂಪಿನಲ್ಲಿ ಹಲ್ಲೆಗೈದು ದರೋಡೆ ಮಾಡಲಾಗಿದೆ ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version