ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಜನ ಸೇರುವುದಿಲ್ಲ; ಸಾಮಾನ್ಯರಿಂದ ಸಂಗೀತದ ಆಸ್ವಾದನೆ ಸಾಧ್ಯವಿಲ್ಲ ಎನ್ನಲಾಗುತ್ತದೆ. ಇದು ನಿಜವಲ್ಲ. ಸಂಗೀತ ಶ್ರವಣದಿಂದ ಹಂತಹಂತವಾಗಿ ಸಂಗೀತಾಸಕ್ತಿ ಹುಟ್ಟಿಕೊಂಡು, ವೃದ್ಧಿಯಾಗುತ್ತದೆ. ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅಷ್ಟಷ್ಟೆ ಜನರಿಗೆ ಅದರ ಸವಿ ಉಣಿಸಿದರೆ ದೊಡ್ಡ ಸಂಖ್ಯೆಯ ಶ್ರೋತೃಗಳನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳು ಇವೆ ಎಂದು ಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿ ಹೇಳಿದರು.
ಗಾಯಕರೂ, ಸಂಗೀತ ಗುರುಗಳೂ ಆಗಿರುವ ಗೋಪಾಡಿಯ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ, ವಿದುಷಿ ಪ್ರತಿಮಾ ಭಟ್ ದಂಪತಿ ನೇತೃತ್ವದಲ್ಲಿ ಕುಂದಾಪುರ ಪರಿಸರದ ಸಮಾನ ಮನಸ್ಕರು ಸೇರಿ ಇತ್ತೀಚೆಗೆ ಅಗಲಿದ ಸಿತಾರ್ ವಾದಕ ಹಾಗೂ ಕಲಾ ಸಂಘಟಕ ಎ. ಅವಿನಾಶ್ ಹೆಬ್ಬಾರ್ ಅವರ ಆಶಯದ ಮುಂದುವರಿಕೆಗಾಗಿ ಆರಂಭಿಸಿರುವ ’ಸಂಗೀತ ಅವಿನಾಶಿ ಪ್ರತಿಷ್ಠಾನ’ವನ್ನು ಕುಂದಾಪುರದ ಪಾರಿಜಾತ ಹೋಟೆಲ್‌ನ ಪದ್ಮಾವತಿ ಸಭಾಗೃಹದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಎಂದಾಕ್ಷಣ ಅವಿನಾಶ್ ಹೆಬ್ಬಾರ್ ನೆನಪಾಗುತ್ತಾರೆ. ಸಂಗೀತಕ್ಕೆ ಸಾವಿಲ್ಲ. ಅಂತೆಯೇ ಸಂಗೀತ ಪ್ರಸಾರಕ್ಕಾಗಿ ದುಡಿದ ಅವಿನಾಶ್ ಹೆಬ್ಬಾರರೂ ಪ್ರತಿಷ್ಠಾನದ ಮೂಲಕ ಅವಿನಾಶಿಯಾಗಲಿ ಎಂದು ಅವರು ಹಾರೈಸಿದರು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಭಾರತಿಯ ಟ್ರಸ್ಟಿ ಎ. ವೈಕುಂಠ ಹೆಬ್ಬಾರ್ ಅತಿಥಿಗಳಾಗಿದ್ದರು. ಸತೀಶ ಭಟ್ ಮಾಳಕೊಪ್ಪ ಸ್ವಾಗತಿಸಿದರು. ಟ್ರಸ್ಟಿಗಳಲ್ಲಿ ಒಬ್ಬರಾದ ಪಾಂಗಾಳ ಆಶಾ ನಾಯಕ್ ಮಾತನಾಡಿ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಉಪನ್ಯಾಸಕಿ ಶಾರದಾ ಹೊಳ್ಳ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು. ಪ್ರತಿಷ್ಠಾನದ ಎಲ್ಲ ಟ್ರಸ್ಟಿಗಳನ್ನು ವೇದಿಕೆಗೆ ಕರೆದು ಪರಿಚಯಿಸಲಾಯಿತು.
ಉದ್ಘಾಟನೆಯ ಬಳಿಕ ಪ್ರತಿಮಾ ಭಟ್ ಅವರ ಶಿಷ್ಯ ಕೋಟೇಶ್ವರದ ಅಭಿಷೇಕ್ ಭಟ್ ಅವರಿಂದ ಹಾಡುಗಾರಿಕೆ ಮತ್ತು ನಾಗರಾಜ ಹೆಗಡೆ ಶಿರನಾಳ ಅವರಿಂದ ಬಾನ್ಸುರಿ ವಾದನ ನಡೆಯಿತು. ಅಭಿಷೇಕ್‌ಗೆ ವಿಘ್ನೇಶ್ ಕಾಮತ್ ತಬಲಾ ಮತ್ತು ಕೋಟ ವೀಣಾ ನಾಯಕ್ ಹಾರ್ಮೋನಿಯಂನಲ್ಲಿ ನೆರವಾದರು. ಶಿರನಾಳರಿಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾ ಸಾಥ್ ನೀಡಿದರು.